ಕಲಾಬಂಧು ಫೌಂಡೇಷನ್ ವತಿಯಿಂದ ಸಾಧಕರಿಗೆ ಕಲಾಬಂಧು ಮಾಧ್ಯಮ ಪ್ರಶಸ್ತಿ-2023 ಪ್ರದಾನ

ಬೆಂಗಳೂರಿನ ಕಲಾಬಂಧು ಫೌಂಡೇಶನ್ ವತಿಯಿಂದ ಶಿವಾನಂದ ವೃತ್ತದ ಕುಮಾರ ಪಾರ್ಕ್ ಗಾಂಧಿ ಭವನದಲ್ಲಿ ಮಾರ್ಚ್-೨೬ ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ
ವಿವಿಧ ಸಾಧಕರಿಗೆ ಪ್ರಶಸ್ತಿ ಹಾಗೂ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಗದು ಬಹುಮಾನ, “ಕರ್ನಾಟಕ ರತ್ನ” ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಪೌಂಡೇಶನ್ ಅಧ್ಯಕ್ಷ ಹೆಚ್.ನರಸಿಂಹರಾಜು ಉಪಸ್ಥಿತಿಯಲ್ಲಿ ಹಲವಾರು ಗಣ್ಯರು ಆಹ್ವಾನಿತರಾಗಿ ಪಾಲ್ಗೊಂಡರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ
ಅಧ್ಯಕ್ಷ ಶಿವಾನಂದ ತಗಡೂರು, ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಮಾರುತಿ ಮೆಡಿಕಲ್ ಮಾಲೀಕರು, ಸಮಾಜಸೇವಕ ಮಹೇಂದ್ರ ಮನ್ಹೋತ್, ಪತ್ರಕರ್ತ ಆಲ್ಬೂರು ಶಿವರಾಜ್, ಈಡಿಗ ವಾರ್ತೆ ಸುದ್ದಿ ಸಂಪಾದಕ ಡಿ.ಚೆಲುವರಾಜು ಮತ್ತಿತರರು ಆಹ್ವಾನಿತರಾಗಿ ಪಾಲ್ಗೊಂಡಿದ್ದರು.

ಕಲಾಬಂಧು ಮಾಧ್ಯಮ ಪ್ರಶಸ್ತಿ ಪುರಸ್ಕೃತೆ: ಶ್ರೀಮತಿ ಸುಜಯ ಸುರೇಶ್
ಸುಂದರ ನಿಸರ್ಗ ಸೊಬಗಿನ ತೀರ್ಥಹಳ್ಳಿ ತಾಲ್ಲೂಕು ಗುಣಸೆ ಗ್ರಾಮದ ಶ್ರೀಮತಿ ಸುಜಯ ಸುರೇಶ್ ಅವರು ಓದಿದ್ದು ಹತ್ತನೇ ತರಗತಿ ಆದರೂ ಸೃಜನಶೀಲ ಪ್ರತಿಭೆಯಾಗಿ ಸಾರಸ್ವತ ಲೋಕದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಬೆಂಗಳೂರಿನ ಉದ್ಯಮ ಸಿ.ಜಿ.ಸುರೇಶ್ ಅವರನ್ನು ವಿವಾಹವಾಗಿ ಉತ್ತಮ ಗೃಹಿಣಿ ಎನಿಸಿ ಬರಹದಲ್ಲೂ ತೊಡಗಿಸಿಕೊಂಡಿದ್ದಾರೆ. ಇವರು ಮಲೆನಾಡಿನ ಸಂಸ್ಕೃತಿ, ಪರಂಪರೆ, ಹಬ್ಬ, ಆಚರಣೆಗಳ ಕುರಿತು ಸುದೀರ್ಘ ಅಧ್ಯಯನ ನಡೆಸಿ ಸಂಸ್ಕೃತಿ ಸಂಭ್ರಮ ಬೃಹತ್ ಕೃತಿ ರಚಿಸಿ ಪ್ರಕಟಿಸಿದ್ದಾರೆ. ಪತಿ ಸಿ.ಜಿ.ಸುರೇಶ್ ಸ್ಫೂರ್ತಿಯಲ್ಲಿ ಇವರು ಇನ್ನು ಹಲವು ಕೃತಿಗಳ ರಚನೆಯಲ್ಲಿ ನಿರತರು. ಇವರ ಈ ಕೃತಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಹೆಚ್‌ಡಿ ಅಧ್ಯಯನಕಾರರಿಗೆ ಬೃಹತ್ ವಿಸ್ತಾರದ ಆಕಾರ ಗ್ರಂಥವೆಂಬಷ್ಟು ಪ್ರಶಂಸೆ ಪಡೆದಿದೆ. ಸಾಹಿತಿ ಲಕ್ಷ್ಮಣ ಕೊಡಸೆ ಕೃತಿ ಬಗ್ಗೆ ಉತ್ತಮ ವಿಮರ್ಶೆ ಬರೆದು ಶ್ಲಾಘಿಸಿರುತ್ತಾರೆ. ಪತ್ರಕರ್ತ ಕೆ.ವಿ.ರಾಮಕೃಷ್ಣಮೂರ್ತಿ ಅವರು ಇವರ ವ್ಯಕ್ತಿ ವಿಶೇಷ ಪ್ರತಿಭೆಯನ್ನು ವಿವರಿಸಿ ಅಂಕಣ ಬರೆದಿದ್ದಾರೆ.
ಸಮಾಜ ಸೇವಕ ಯುವ ಉದ್ಯಮಿ: ಹನುಮಂತರಾಜು
ಸ್ವಾವಲಂಭಿ ಸ್ವಂತ ಬದುಕು ರೂಪಿಸಿಕೊಳ್ಳಲು ತುಡಿತ ಇದ್ದ ಕಾರಣ ತುಮಕೂರಿನ ಹನುಮಂತರಾಜು ಸರ್ಕಾರಿ ಅಥವಾ ಖಾಸಗಿ ಕ್ಷೇತ್ರ ಆಶ್ರಯಿಸದೆ ಸಣ್ಣ ಪ್ರಮಾಣದ ಉದ್ಯಮ ಸ್ಥಾಪಿಸಿದರು. ಓದಿದ್ದು ಪಿಯುಸಿ ಆದರೂ ಶ್ರಮವಹಿಸಿ ದುಡಿಮೆಗಿಳಿದರು. ಮೊದಲಿಗೆ ನೀರಿನ ತೊಟ್ಟಿ ಸ್ವಚ್ಛತಾ ಕೆಲಸ ಶುರುವಿಟ್ಟರು. ಇದನ್ನೆ ಯಾವುದೇ ಕೀಳರಿಮೆ ಅನುಭವಿಸಲಿಲ್ಲ. ಶ್ರಮದ ಕೆಲಸ ಕೈಹಿಡಿಯಿತು. ಇದರ ಸ್ಫೂರ್ತಿಯಲ್ಲಿ ಕುಡಿಯುವ ನೀರು ಶುದ್ಧೀಕರಣ ಸಾಮಗ್ರಿ ಅದಾದ ಬಳಿಕ ಸೋಲಾರ್ ವಾಟರ್ ಹೀಟರ್ ಘಟಕ ಉತ್ಪಾದಿಸಲು ಆರಂಭಿಸಿದರು. ರಾಯಲ್ ಸನ್ ಸೋಲಾರ್ ಸಿಸ್ಟಮ್ ಹೆಸರಿನಲ್ಲಿ ಸ್ವಂತ ಉದ್ಯಮವನ್ನು ಸಣ್ಣ ಪ್ರಮಾಣದಲ್ಲಿ ಆರಂಭಿಸಿದರು. ಉತ್ತಮ ಗುಣಮಟ್ಟ ಖಾತರಿ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾದರು.
ತುಮಕೂರಿನಲ್ಲಿ ಆರಂಭವಾದ ಸೋಳಾರ್ ಸಿಸ್ಟಮ್ ಪೂರೈಕೆ ನಂತರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬೇಡಿಕೆ ಪಡೆಯುವಂತಾಗಿದೆ. ಸ್ವಂತ ಮಾಲೀಕತ್ವದ ಸಂಸ್ಥೆಯ ವಹಿವಾಟು ಲಾಭದಾಯಕವಾಗಿ ಮುನ್ನಡೆದಿದೆ. ವ್ಯಾಪಾರ ವಹಿವಾಟಿಗಷ್ಟೇ ಸೀಮಿತವಾಗದ ಹನುಮಂತರಾಜು ಸಮಾಜಮುಖಿ ಸೇವಾ ಕಾರ್ಯಗಳಿಗೂ ತೊಡಗಿಸಿಕೊಂಡು ಬರುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ ಕಾಲಘಟ್ಟ, ಪ್ರವಾಹ ಎದುರಾದ ಸಂದರ್ಭದಲ್ಲಿ ಸಂತ್ರಸ್ತರಿಗೆ ಕೈಲಾದ ನೆರವು ಕಲ್ಪಿಸಿದ್ದು, ಸೇವಾ ಕಾರ್ಯ ಮುಂದುವರಿದಿದೆ. ಸಮಾನಮನಸ್ಕ ಹಿತೈಷಿಗಳ ತಂಡ ಕಟ್ಟಿಕೊಂಡು ಬಡ ವಿದ್ಯಾರ್ಥಿಗಳೀಗೆ ಪಾಠೋಪಕರಣ ವಿತರಿಸುವುದೂ ನಡೆದಿದೆ. ಎಂಟತ್ತು ಜನರಿಗೆ ಉದ್ಯೋಗದಾತರೂ ಆಗಿ ಮಂಜುನಾಥ್ ಉದ್ಯಮ ಕ್ಷೇತ್ರದಲ್ಲೂ ಯಶಸ್ಸು ಕಂಡು ಜನಪರ ಕಾರ್ಯಗಳಲ್ಲಿ ನಿರತರಾಗಿರುವುದು ಶ್ಲಾಘನೀಯ.

ಡಾ.ಲಯನ್ ಬಿ.ಎಂ. ರವಿನಾಯ್ಡು
ಬೆಂಗಳೂರಿನ ವಿದ್ಯಾರಣ್ಯಪುರ ಅಂಚೆ ದೊಡ್ಡಬೊಮ್ಮಸಂದ್ರ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಸಂಸ್ಥಾಪಕ ಸೇವಾಕರ್ತರು ಹಾಗೂ ದೇವಸ್ಥಾನ ಕ್ಷೇತ್ರದ ಧರ್ಮಾಧಿಕಾರಿ ಆಗಿರುವ ಡಾ.ಲಯನ್ ಬಿ.ಎಂ.ರವಿನಾಯ್ಡು ಅವರು ಧಾರ್ಮಿಕ, ಸಾಮಾಜಿಕ ಸೇವೆಗಳಲ್ಲಿ ಶ್ರದ್ಧಾಭಕ್ತಿಯಿಂದ ತೊಡಗಿಸಿಕೊಂಡು ಬರುತ್ತಿದ್ದಾರೆ. ಅಪಾರ ದೈವಭಕ್ತರಾದ ಇವರ ಕುಟುಂಬವರ್ಗದವರೂ ಸಹ ರವಿನಾಯ್ಡು ಅವರ ಜನಪರ ಕಾರ್ಯಚಟುವಟಿಕೆಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಇವರ ಸೇವಾ ನಿಷ್ಠೆ
ಸಮಾಜಮುಖಿ ಕಾರ್ಯಗಳಿಂದಾಗಿ ಲಯನ್ಸ್ ಕ್ಲಬ್ ಸ್ಥಾನಮಾನ ದೊರಕಿದೆ. ಇದರ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಾ ಅಸಹಾಯಕ ವೃದ್ಧರಿಗೆ ವೈದ್ಯಕೀಯ ನೆರವಿಗೆ ಸದಾ ನಿಲ್ಲುವ ಹೃದಯವಂತರು.
ಡಾ.ಲಯನ್ ಬಿ.ಎಂ.ರವಿನಾಯ್ಡು ಅವರ ಜನಪರ ಸೇವಾ ಸಾಧನೆ
ಇವರ ಪುತ್ರ ಲಯನ್ ಆರ್.ಲೀಲಾಕೃಷ್ಣ ಹಾಗೂ ಪತ್ನಿ ಲಯನ್ ಮಂಜುಳ ಸಹ ರವಿನಾಯ್ಡು ಅವರ ಸಮಾಜಸೇವೆ, ಔದಾರ್ಯ ಕಾರ್ಯಗಳಿಗೆ ಬೆಂಬಲಿಸಿ ಶ್ರಮಿಸುತ್ತಿದ್ದಾರೆ. ನಿರಂತರವಾಗಿ ಬಡ ಅಸಹಾಯಕ ಜನರ ಆರೋಗ್ಯ ತಪಾಸಣೆಗೆ ವೈದ್ಯಕೀಯ ಶಿಬಿರ ಏರ್ಪಡಿಸುತ್ತಾರೆ. ದೇವಸ್ಥಾನದ ಆಶ್ರಯದಲ್ಲಿ ಏರ್ಪಾಡಾಗುವ ಶಿವರಾತ್ರಿ, ಗಣೇಶೋತ್ಸವ, ಯುಗಾದಿ, ನವರಾತ್ರಿ ಉತ್ಸವಗಳಿಗೆ ಇವರ ನೆರವು ಸದಾ ಇರಲಿದೆ. ಅಂತೆಯೇ ವಯೋಸಹಜ ರೋಗಗಳ ಹಿರಿಯ ನಾಗರೀಕರು ಕಾಣಿಸಿಕೊಂಡರೆ ಅಂತಹವರಿಗೆ ಉದಾರವಾಗಿ ನೆರವಾಗುವ ಮಾನವೀಯತೆ ಇವರದು. ಅದರಂತೆ ಸಮಾಜಮುಖಿ ಕಾರ್ಯಗಳಲ್ಲಿ ಕೋಮು ಸೌಹಾರ್ಧ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಗಳಿಗೆ ಇವರ ನೆರವು ಮುಂದುವರಿದಿದೆ. ಸರಳ ಸಜ್ಜನರಾಗಿ ಜನಪರ ಚಟುವಟಿಕೆಗಳಲ್ಲಿ ಧನ್ಯತೆ ಕಾಣುತ್ತಿದ್ದಾರೆ. ಡಾ.ಲಯನ್ ಬಿ.ರವಿನಾಯ್ಡು ಅವರ ಪುತ್ರ ಲಯನ್ ಆರ್.ಲೀಲಾಕೃಷ್ಣ ಅವರ ಸಾಮಾಜಿಕ ಕಳಕಳಿಯನ್ನು ಗೌರವಿಸಿ ಅಭಿನಂದನಿಸಲಾಯಿತು.

ಹೃದಯವಂತ ತಜ್ಞ ವೈದ್ಯ ಡಾ.ಶಿವರಾಜುಗೌಡ
ಬೆಂಗಳೂರಿನ ಮಾಗಡಿ ಮುಖ್ಯರಸ್ತೆ ಮುದ್ದಿನಪಾಳ್ಯದಲ್ಲಿ ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸುಸಜ್ಜಿತವಾಗಿ ಸ್ಥಾಪಿಸಿ ಇದರ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವಾ ನಿರತಾಗಿದ್ದಾರೆ. ಆರ್ಥಿಕವಾಗಿ ದುರ್ಬಲರು, ಬಡವರಿಗೆ ಹಾಗೂ ಅಸಹಾಯಕ ಕಲಾವಿದರಿಗೆ ರಿಯಾಯಿತಿ ವೆಚ್ಚದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವುದಲ್ಲದೆ, ಬಡರೋಗಿಗಳಿಗೆ ಉಚಿತವಾಗಿ ಸೌಲಭ್ಯ ಕಲ್ಪಿಸುವ ಹೃದಯವಂತಿಗೆ ಇವರದು. ಕೋವಿಡ್ ಸಾಂಕ್ರಾಮಿಕ ಸಂಕಷ್ಟದಲ್ಲಿಯೂ ಇವರು ಜೀವದ ಹಂಗು ತೊರೆದು ಕೋವಿಡ್ ಪೀಡಿತರಿಗೆ ವೈದ್ಯಕೀಯ ನೆರವು ನೀಡಿದುದು ಶ್ಲಾಘನೀಯ. ವೈದ್ಯ ವೃತ್ತಿಯ ಜೊತೆಗೆ ಇವರು ಹಲವಾರು ಜನಪರ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡು ಶ್ರಮಿಸುತ್ತಿದ್ದಾರೆ. ನಿರಂತರವಾಗಿ ವೈದ್ಯಕೀಯ ಶಿಬಿರ ಹಮಿಕೊಂಡು ಬರಲಾಗುತ್ತಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಡಾ.ಶಿವರಾಜುಗೌಡ ಕೊಡುಗೆಯಾಗಿರುತ್ತದೆ.

ವಿವಿಧ ರಂಗಗಳಲ್ಲಿ ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಅವರ ಅವಿರತ ಸೇವೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಎರಡನೇ ಅವಧಿಗೆ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಸೇವಾ ನಿರತರು. ಹಾಸನದ ಜನಮಿತ್ರ ಪತ್ರಿಕೆ ಮೂಲಕ ಪತ್ರಿಕಾ ರಂಗಕ್ಕೆ ಪಾದಾರ್ಪಣೆ ಮಾಡಿರುವ ಇವರು ಪ್ರಸ್ತುತ ವಿಜಯವಾಣಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರೈತರಪರ, ಕನ್ನಡಪರ ಹೋರಾಟದಲ್ಲೂ ಇವರು ತಮ್ಮನ್ನು ತೊಡಗಿಸಿಕೊಂಡವರು. ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಜೀವದ ಹಂಗು ತೊರೆದು ಕೋವಿಡ್ ಪೀಡಿತ ಪತ್ರಕರ್ತರ ನೆರವಿಗೆ ಧಾವಿಸಿದವರು. ಇದರ ಅನುಭವ ಕೋವಿಡ್ ಕಥನಗಳು, ಕೃತಿರೂಪದಲ್ಲಿ ಪ್ರಕಟಿತಗೊಂಡಿದೆ. ಇವರ ಸಮಾಜಮುಖಿ, ಪತ್ರಕರ್ತರ ಸ್ನೇಹಿ, ಸೇವಾ ಕಾರ್ಯವನ್ನು ಗುರುತಿಸಿ ಕಲಾಬಂಧು ಫೌಂಡೇಷನ್ ಅಭಿನಂದಿಸಿ ಸತ್ಕರಿಸಲಾಯಿತು.

ಪತ್ರಕರ್ತ, ಸಾಕ್ಷ್ಯಚಿತ್ರ ನಿರ್ದೇಶಕ: ಡಿ.ಚೆಲುವರಾಜು
ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಎಂಎಸ್ ಪದವೀಧರ ಡಿ.ಚೆಲುವರಾಜು ಅವರು ಕಳೆದ ೩೦ ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಸಾಕ್ಷ್ಯಚಿತ್ರ ನಿರ್ದೇಶಕರಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಹೆಚ್.ಎಸ್.ದೊರೆಸ್ವಾಮಿ, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಎಂ.ಎಸ್.ಮಂಮುನಾಥ್ ಅವರ ಕುರಿತು ಸಾಕ್ಷ್ಯಚಿತ್ರ ನಿರ್ದೇಶಿಸಿದ್ದಾರೆ. ಕಲಾಬಂಧು ದಿನಪತ್ರಿಕೆ ಸುದ್ದಿ ಸಂಪಾದಕರಾಗಿಯೂ ಕಾರ್ಯನಿರತರಾಗಿದ್ದಾರೆ. ಇವರ ಸಾಹಿತ್ಯ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಕಲಾಬಂಧು ಫೌಂಡೇಷನ್ ವತಿಯಿಂದ ಡಿ.ಚೆಲುವರಾಜು ಅವರನ್ನು ಗೌರವಿಸಲಾಯಿತು.