Saturday, June 3, 2023
Homeನೃತ್ಯಉದಯೋನ್ಮುಖ ಚತುರ್ಕಲಾವಿದೆಯರ ನೃತ್ಯ ಸಮರ್ಪಣೆ

ಉದಯೋನ್ಮುಖ ಚತುರ್ಕಲಾವಿದೆಯರ ನೃತ್ಯ ಸಮರ್ಪಣೆ

ಖ್ಯಾತ ‘ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್’ ನೃತ್ಯಶಾಲೆಯ ಅಂತರರಾಷ್ಟ್ರೀಯ ನೃತ್ಯಕಲಾವಿದೆ, ಗುರು, ನಟುವನ್ನಾರ್ ಮತ್ತು ಅಭಿನಯ ಚತುರೆ-ನೃತ್ಯಸಂಯೋಜಕಿ ಆಚಾರ್ಯ ಡಾ. ರಕ್ಷಾ ಕಾರ್ತೀಕ್ ನೃತ್ಯಜಗತ್ತಿನಲ್ಲಿ ಜನಪ್ರಿಯರಾಗಿದ್ದಾರೆ. ಇಂಥ ಬದ್ಧತೆಯ ಪ್ರತಿಭಾನ್ವಿತ ಗುರುಗಳ ನುರಿತ ತರಬೇತಿಯಲ್ಲಿ ರೂಪುಗೊಂಡ ನಾಲ್ವರು ನೃತ್ಯಕಲಾವಿದೆಯರು ಇದೇ ತಿಂಗಳ 29 ಏಪ್ರಿಲ್ ಶನಿವಾರದಂದು ಸಂಜೆ 5.30 ಗಂಟೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ‘ನೃತ್ಯ ಸಮರ್ಪಣಂ’ ಕಾರ್ಯಕ್ರಮದ ಮೂಲಕ ತಮ್ಮ ನೃತ್ಯದ ಕಲಾಸೊಬಗನ್ನು ಕಲಾರಸಿಕರ ಸಮ್ಮುಖ ಪ್ರದರ್ಶಿಸಲಿದ್ದಾರೆ. ಎಲ್ಲರಿಗೂ ಸುಸ್ವಾಗತ.


ಶ್ರೀಮತಿ ಹಾಸಿನಿ ಚಂದ್ರಶೇಖರ್, ಕು.ಪ್ರತೀಕ್ಷಾ ಬಾಲಾಜಿ ಶ್ರೀನಿವಾಸನ್, ಕು. ಸಾನ್ವಿ ಲಾಲ್ವಾನಿ ಮತ್ತು ಕು. ಸಂಹಿತಾ ಶ್ರೀಧರ್ ಈ ನಾಲ್ವರು ಉದಯೋನ್ಮುಖ ಕಲಾವಿದೆಯರು ನಾಡಿನ ಎಲ್ಲ ಪ್ರಮುಖ ದೇವಾಲಯಗಳಲ್ಲಿ, ಹಲವಾರು ನೃತ್ಯೋತ್ಸವಗಳಲ್ಲಿ ನರ್ತಿಸಿದ್ದಾರೆ. ನಟನಂ ಸಂಸ್ಥೆಯ ಎಲ್ಲ ನೃತ್ಯರೂಪಕಗಳಲ್ಲಿ ಭಾಗವಹಿಸಿ ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿ ರಸಿಕರ ಮೆಚ್ಚುಗೆ ಗಳಿಸಿರುವುದು ವಿಶೇಷದ ಸಂಗತಿ.
ಕು.ಪ್ರತೀಕ್ಷಾ ಬಾಲಾಜಿ ಶ್ರೀನಿವಾಸನ್- ಶ್ರೀಮತಿ ರಮ್ಯಾ-ಬಾಲಾಜಿ ಅವರ ಪುತ್ರಿಯಾದ ಹದಿನಾಲ್ಕರ ಪ್ರತೀಕ್ಷಾಗೆ ನೃತ್ಯ ಬಾಲ್ಯದ ಪ್ರೀತಿ. ಭರತನಾಟ್ಯ ಕಲಿಯುವ ಆಕಾಂಕ್ಷೆ -ಹುರುಪು ಹೆಚ್ಚಾಗಿ ಕಳೆದ ಮೂರುವರ್ಷಗಳಿಂದ ಡಾ. ರಕ್ಷಾ ಅವರ ಕಕ್ಷೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ವೆಂಕಟ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದು, ಇವಳಿಗೆ ಗಣಿತ ಮತ್ತು ವಿಜ್ಞಾನದ ವಿಷಯಗಳಲ್ಲಿ ಅತ್ಯಾಸಕ್ತಿ. ಭರತನಾಟ್ಯದ ‘ಪ್ರವೇಶಿಕಾ ಪೂರ್ಣ’ ನೃತ್ಯಪರೀಕ್ಷೆಯಲ್ಲಿ ಶ್ರೇಷ್ಠ ಅಂಕಗಳನ್ನು ಗಳಿಸಿ ಯಶಸ್ವಿಯಾಗಿದ್ದಾಳೆ. ಹಾಗೆಯೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಗುರು ಪ್ರತಿಮಾ ಪ್ರಶಾಂತ್ ಅವರಲ್ಲಿ ಕಲಿಯುತ್ತಿದ್ದು, ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ಪರೀಕ್ಷೆಯಲ್ಲೂ ಉತ್ತಮಾಂಕಗಳಿಂದ ಜಯಶಾಲಿಯಾಗಿದ್ದಾಳೆ. ಮೈಸೂರು ದಸರಾ, ತಿರುಪತಿ ದೇವಾಲಯದಲ್ಲಿ ನಾದ ನೀರಾಜನಂ, ಉಡುಪಿ ಶ್ರೀಕೃಷ್ಣ ದೇವಾಲಯ, ಶ್ರೀರಂಗಪಟ್ಟಣ ಮುಂತಾದ ಅನೇಕ ದೇವಾಲಯಗಳಲ್ಲಿ ನಡೆದ ‘ನಟನಂ’ ತಂಡದ ಪ್ರದರ್ಶನದ ಭಾಗವಾಗಿ ನೃತ್ಯಪ್ರದರ್ಶನ ನೀಡಿದ್ದಾಳೆ.
ಕು. ಸಂಹಿತಾ ಶ್ರೀಧರ್ – ಶ್ರೀ ಶ್ರೀಧರ್ ಮತ್ತು ಶಾಲಿನಿ ದಂಪತಿಗಳಾದ ಮಗಳಾದ ಸಂಹಿತಾ ಸೈಂಟ್ ಪಾಲ್ ಇಂಗ್ಲೀಷ್ ಶಾಲೆಯಲ್ಲಿ 9 ನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ಸಂಹಿತಾಗೆ, ಕನ್ನಡ, ಸಂಸ್ಕೃತ ಮತ್ತು ಭಾರತೀಯ ಪೌರಾಣಿಕ ವಿಷಯಗಳಲ್ಲಿ ಅತ್ಯಾಸಕ್ತಿ. ಕಳೆದ 4 ವರ್ಷಗಳಿಂದ ಡಾ. ರಕ್ಷಾ ಅವರಲ್ಲಿ ಆಸಕ್ತಿಯಿಂದ ನೃತ್ಯಾಭ್ಯಾಸ ಮಾಡುತ್ತಿರುವ ಇವಳು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿ. ಬಾಲಸುಬ್ರಹ್ಮಣ್ಯ ಶರ್ಮ ಅವರಲ್ಲಿ ಕಲಿಯುತ್ತಿದ್ದಾಳೆ. ತಿರುಪತಿ, ನಂಜನಗೂಡು, ಉಡುಪಿ, ಶ್ರೀರಂಗಪಟ್ಟಣ, ಬೈಲೂರು ಮುಂತಾದ ದೇವಾಲಯಗಳಲ್ಲಿ ನರ್ತಿಸಿದ್ದಾಳೆ.
ಕು. ಸಾನ್ವಿ ಲಾಲ್ವಾನಿ- ಶೀತಲ್ ಮತ್ತು ಪ್ರತಿಭಾ ಲಾಲ್ವಾನಿ ಅವರ ಪುತ್ರಿಯಾದ 13 ವರ್ಷಗಳ ಸಾನ್ವಿ,ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ಓದುತ್ತಿದ್ದು, ಅವಳಿಗೆ ಕಲಾಪ್ರೀತಿ ಚಿಕ್ಕಂದಿನಿಂದಲೂ. ಕಳೆದ 3 ವರ್ಷಗಳಿಂದ ಡಾ. ರಕ್ಷಾ ಅವರಲ್ಲಿ ನೃತ್ಯಶಿಕ್ಷಣ ಪಡೆಯುತ್ತಿರುವ ಇವಳು, ಭರತನಾಟ್ಯದ ‘ಪ್ರವೇಶಿಕಾ ಪೂರ್ಣ’ ನೃತ್ಯಪರೀಕ್ಷೆಯಲ್ಲಿ ಶ್ರೇಷ್ಠ ಅಂಕಗಳನ್ನು ಗಳಿಸಿ ಯಶಸ್ವಿಯಾಗಿದ್ದಾಳೆ. ಉಡುಪಿ, ನಂಜನಗೂಡು ಮುಂತಾದ ದೇವಾಲಯಗಳಲಿ ನರ್ತಿಸಿರುವ ಇವಳು, ‘ನಟನಂ’ ಶಾಲೆಯ ಪ್ರಸಿದ್ಧ ‘ದಾಸಶ್ರೇಷ್ಠ ಪುರಂದರ’ ನೃತ್ಯರೂಪಕ ಮತ್ತು ‘ ತ್ಯಾಗರಾಜ ಆರಾಧನೆ’ಯಲ್ಲಿ ಪಾಲ್ಗೊಂಡಿದ್ದಾಳೆ. ಕ್ರೀಡಾಪಟುವಾದ ಇವಳು 13 ಕಿ,ಮಿ ಓಟದ ಸ್ಪರ್ಧೆಯಲ್ಲಿ ಬಹುಮಾನಿತೆ. ಓದಿನಲ್ಲೂ ಮುಂದಿರುವ ಇವಳಿಗೆ ಸಂಗೀತ ಮತ್ತು ಲಲಿತಕಲೆಗಳಲ್ಲೂ ಆಸಕ್ತಿ.
ಶ್ರೀಮತಿ ಹಾಸಿನಿ ಚಂದ್ರಶೇಖರ್ – ಶ್ರೀ ಎನ್. ಚಂದ್ರಶೇಖರ್ ಮತ್ತು ರತ್ನ ಪುತ್ರಿಯಾದ ಹಾಸಿನಿ, ಭರತನಾಟ್ಯವನ್ನು ಚಿಕ್ಕಂದಿನಲ್ಲಿ ಸ್ವಲ್ಪಕಾಲ ಕಲಿತು, ಕಾರಣಾಂತರಗಳಿಂದ ನಿಲ್ಲಿಸಬೇಕಾಯಿತು. ಸುಪ್ತ ಆಸೆ- ಆಸಕ್ತಿಗಳು ವ್ಯಕ್ತಗೊಂಡದ್ದು ಆಕೆಯ 6 ವರ್ಷದ ಮಗಳು ಡಾ. ರಕ್ಷಾ ಅವರಲ್ಲಿ ನೃತ್ಯ ಕಲಿಯಲು ಶಿಷ್ಯೆಯಾಗಿ ಸೇರ್ಪಡೆಗೊಂಡಾಗ. ತಾಯಿಯೂ ತಮ್ಮ 33 ನೆಯ ವಯಸ್ಸಿಗೆ ಮಗಳೊಡನೆ ರಕ್ಷಾರ ಶಿಷ್ಯೆಯಾದರು. ಅತ್ಯಾಸಕ್ತಿ-ಪರಿಶ್ರಮಗಳಿಂದ ಅಭ್ಯಾಸ ಮಾಡುತ್ತಾ ಅನೇಕ ವೇದಿಕೆಗಳ ಮೇಲೆ ನೃತ್ಯ ಪ್ರದರ್ಶನ ನೀಡುವ ಮಟ್ಟಕ್ಕೆ ತಯಾರಾದರು. ತಿರುಪತಿ, ಚಿದಂಬರಂ, ಶ್ರೀರಂಗಪಟ್ಟಣ, ತಿರುವಾಯೂರು, ನಂಜನಗೂಡು, ಕಾಂಚೀಪುರಂ ಮುಂತಾದೆಡೆ ನರ್ತಿಸಿದ ಅನುಭವ ಪಡೆದರು. ಈಕೆ ವಿ.ಟಿ.ಯು ನಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ನಲ್ಲಿ ಬಿ.ಇ. ಪದವಿ ಪಡೆದು, ಪ್ರಸಕ್ತ ಬೆಂಗಳೂರಿನ ಬಾಷ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು 15 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಫೋಟೋಗ್ರಫಿ ಮತ್ತು ಪೇಂಟಿಂಗ್ ಈಕೆಯ ಹವ್ಯಾಸ.
ಈ ಎಲ್ಲ ಕಲಾವಿದೆಯರಿಗೂ ಭರತನಾಟ್ಯದ ದೈವೀಕ ಕಲೆಯನ್ನು ಗುರು ರಕ್ಷಾ ಅವರ ಪ್ರತಿಭಾ ನೈಪುಣ್ಯದ ಮಾರ್ಗದರ್ಶನದಲ್ಲಿ ಪಡೆದು, ನೃತ್ಯಕ್ಷೇತ್ರದಲ್ಲಿ ಔನ್ನತ್ಯವನ್ನು ಸಾಧಿಸುವ ಬಯಕೆ.
**************** ವೈ.ಕೆ.ಸಂಧ್ಯಾ ಶರ್ಮ

RELATED ARTICLES
- Advertisment -
Google search engine

Most Popular

Recent Comments