Tuesday, June 6, 2023
Homeಇದೀಗ ಬಂದ ತಾಜಾ ಸುದ್ದಿನಮ್ಮ ಜನರಿಗೆ ಮೂಲಭೂತ ಸೌಲಭ್ಯ ಪಡೆಯುವುದಕ್ಕಿಂತ ಚುನಾವಣೆ ಬಗ್ಗೆಯೇ ಹೆಚ್ಚು ಆಸಕ್ತಿ

ನಮ್ಮ ಜನರಿಗೆ ಮೂಲಭೂತ ಸೌಲಭ್ಯ ಪಡೆಯುವುದಕ್ಕಿಂತ ಚುನಾವಣೆ ಬಗ್ಗೆಯೇ ಹೆಚ್ಚು ಆಸಕ್ತಿ

ಹಣ ಪಡೆದು ಮತ ಹಾಕುವುದರಲ್ಲೇ ಜನರಿಗೆ ಆಸಕ್ತಿ; ಹೈಕೋರ್ಟ್ ಕಿಡಿ

ಬೆಂಗಳೂರು, ಏಪ್ರಿಲ್ 21; ಸಾರ್ವಜನಿಕ ಪ್ರಕಟಣೆ ನೀಡಿದ ಹೊರತಾಗಿಯೂ ಇಡೀ ರಾಜ್ಯದ ಯಾವೊಂದು ಭಾಗದಿಂದಲೂ ಸ್ಮಶಾನ ಜಾಗಕ್ಕೆ ಭೂಮಿ ಮಂಜೂರಾತಿ ಕೋರಿ ಸರ್ಕಾರಕ್ಕೆ ಜನರು ಮನವಿ ಸಲ್ಲಿಸದ ಬಗ್ಗೆ ಕರ್ನಾಟಕ ಹೈಕೋರ್ಟ್ ಕಿಡಿ ಕಾರಿದೆ. ಅಲ್ಲದೇ, ನಮ್ಮ ಜನರಿಗೆ ಮೂಲಭೂತ ಸೌಲಭ್ಯ ಪಡೆಯುವುದಕ್ಕಿಂತ ಚುನಾವಣೆ ಬಗ್ಗೆಯೇ ಹೆಚ್ಚು ಆಸಕ್ತಿ, ಅದರಲ್ಲೂ ಹಣ ಪಡೆದು ಮತ ಹಾಕುವುದರಲ್ಲೇ ಮಗ್ನರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ.

 

ರಾಜ್ಯದಲ್ಲಿ ಸ್ಮಶಾನ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಸುವಂತೆ ಸೂಚಿಸಿ ಹೈಕೋರ್ಟ್ ಹೊರಡಿಸಿರುವ ಆದೇಶ ಜಾರಿಗೊಳಿಸದಕ್ಕೆ ಬೆಂಗಳೂರಿನ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸರ್ಕಾರಿ ವಕೀಲರು, 2023ರ ಏಪ್ರಿಲ್ 19ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಒದಗಿಸಿರುವ ಪತ್ರ ಒಳಗೊಂಡ ಮೆಮೋವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. 2023ರ ಏಪ್ರಿಲ್ 6ರಂದು ಹೈಕೋರ್ಟ್ ಹೊರಡಿಸಿದ ಆದೇಶದಂತೆ ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ ಗ್ರಾಮಕ್ಕೆ ಭೂಮಿ ಮಂಜೂರಾತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ತಿಳಿಸಿ ಪತ್ರಿಕೆಯಲ್ಲಿ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು.

ಆದರೆ, ಸಾರ್ವಜನಿಕ ಪ್ರಕಟಣೆ ಪ್ರಕಟಿಸಿದ ಹೊರತಾಗಿಯೂ ಇಡೀ ರಾಜ್ಯದ ಯಾವುದೇ ಭಾಗದಿಂದಲೂ ಯಾವೊಬ್ಬ ಗ್ರಾಮಸ್ಥನಿಂದಲೂ ಸ್ಮಶಾನಕ್ಕೆ ಭೂಮಿ ಮಂಜೂರಾತಿ ಕೋರಿ ಮನವಿ ಬಂದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಅದಕ್ಕೆ ಸಿಟ್ಟಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು, ನಮ್ಮ ದೇಶದಲ್ಲಿ ಸ್ಮಶಾನಕ್ಕೆ ಭೂಮಿ ಇತ್ಯಾದಿ ಮೂಲ ಸೌಲಭ್ಯ ಪಡೆಯುವುದರ ಬಗ್ಗೆ ಜನರಿಗೆ ಆಸಕ್ತಿ ಇಲ್ಲ. ಚುನಾವಣೆ ವಿಚಾರವಾಗಿ ಹೆಚ್ಚಿನ ಗಮನ ಹರಿಸುತ್ತಾರೆ. ಚುನಾವಣೆ ಬಂತಲ್ಲ, ಹಣ ವಸೂಲಿ ಮಾಡುವ ಕುರಿತು ಯೋಚಿಸುತ್ತಿದ್ದಾರೆ. ಜನರೇ ಹೀಗಾದರೆ ನ್ಯಾಯಾಲಯಗಳೇನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.

ಅಲ್ಲದೆ, ತಮಗೆ ಬೇಕಾದ ಮೂಲ ಸೌಲಭ್ಯದ ಬಗ್ಗೆ ಜನ ಆಸಕ್ತಿ ತೋರದ್ದಕ್ಕೆ ನಮ್ಮ ದೇಶ ಹೀಗಿರುವುದು. ಸ್ವಾತಂತ್ರ್ಯ ಸಿಕ್ಕಿದೆ, ಎಂಜಾಯ್ ಮಾಡಬೇಕಷ್ಟೇ ಎಂಬ ಮನಸ್ಥಿತಿ ಜನರಲ್ಲಿದೆ. ಮತ್ತೆ ಸ್ವಾತಂತ್ರ್ಯ ಹೋದಾಗ ಅದರ ಮೌಲ್ಯ ತಿಳಿಯುತ್ತದೆ. ಮೊದಲು ಸಾರ್ವಜನಿಕರು ಮತ್ತು ಅವರ ಮನಸ್ಥಿತಿ ಬದಲಾಗಬೇಕು. ಪ್ರಕರಣದಲ್ಲಿ ನ್ಯಾಯಾಲಯವು ತನ್ನ ಕೆಲಸ ಮಾಡಿದೆ. ಜನರಿಗೇ ಮೂಲ ಸೌಲಭ್ಯ ಬೇಕಿಲ್ಲ ಎಂದಾದರೆ, ಈ ಪ್ರಕರಣವನ್ನು ಮುಕ್ತಾಯಗೊಳಿಸೋಣ. ಅದು ಬಿಟ್ಟು ಮತ್ತೇನು ಮಾಡುವುದಕ್ಕೆ ಆಗುತ್ತದೆ. ನ್ಯಾಯ ಕಲ್ಪಿಸುತ್ತೇವೆ, ಬನ್ನಿ ಎಂದು ಸಾರಿ ಹೇಳಿದರೂ ಯಾವೊಬ್ಬ ಕಕ್ಷಿದಾರನೂ ಮುಂದೆ ಬಾರದ ಪರಿಸ್ಥಿತಿ ನೆಲೆಸಿರುವುದು ವಿಷಾದ ಎಂದು ನ್ಯಾಯಮೂರ್ತಿಗಳು ತೀಕ್ಷ್ಣವಾಗಿ ನುಡಿದರು.

ಅರ್ಜಿದಾರರ ಪರ ವಕೀಲ ಮೊಹಮ್ಮದ್ ಇಕ್ಬಾಲ್, ಸರ್ಕಾರವು 2023ರ ಏಪ್ರಿಲ್ 20ವರೆಗೆ ರಾಜ್ಯದ ಯಾವೆಲ್ಲಾ ಗ್ರಾಮಗಳಿಗೆ ಸ್ಮಶಾನಕ್ಕೆ ಭೂಮಿ ಸರ್ಕಾರ ಕಲ್ಪಿಸಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ಸಮಗ್ರ ಪ್ರಮಾಣ ಪತ್ರ ಸಲ್ಲಿಸಲಾಗುವುದು. ಅದಕ್ಕೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ, ಅರ್ಜಿದಾರರಿಗೆ ಮೇ 23ರವರೆಗೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.

ರಾಜ್ಯದಲ್ಲಿ ಒಟ್ಟು 30762 ಗ್ರಾಮಗಳಿವೆ. ಅದರಲ್ಲಿ 2491 ಬೇಚರಕ್ (ಜನವಸತಿಯಿಲ್ಲದ) ಗ್ರಾಮಗಳಿವೆ. ಬೇಚರಕ್ ಗ್ರಾಮಗಳನ್ನು ಹೊರತುಪಡಿಸಿದ ಒಟ್ಟು 28,271 ಗ್ರಾಮಗಳ ಪೈಕಿ 28,260 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ ಎಂದು ಕಳೆದ ಫೆಬ್ರವರಿಯಲ್ಲಿ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು. ಸರ್ಕಾರ ಒದಗಿಸಿದ ಈ ಮಾಹಿತಿ ಸೂಕ್ತವಾಗಿಲ್ಲ ಎಂದು ಆಕ್ಷೇಪಿಸಿದ್ದ ಹೈಕೋರ್ಟ್, ಪತ್ರಿಕಾ ಪ್ರಕಟಣೆ ಹೊರಡಿಸಿ ಯಾವ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲ ಎಂಬುದರ ಬಗ್ಗೆ ಜನರಿಂದ ಮಾಹಿತಿ ಪಡೆಯುವಂತೆ ಸೂಚಿಸಿತ್ತು.

RELATED ARTICLES
- Advertisment -
Google search engine

Most Popular

Recent Comments