ಲೇಖನ: ಸಂಜನಾ ಗೋಯಲ್, ಭಾರತೀಯ ಸ್ನಾಯುರೋಗ ಸಂಘಟನೆಯ ಅಧ್ಯಕ್ಷೆ
ಪ್ರಧಾನಿ ನರೇಂದ್ರ ಮೋದಿ ಅವರು ೨೦೧೫ರಲ್ಲಿ, ’ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೇಳುಗರಿಗೆ ಒಂದು ವಿಶಿಷ್ಟವಾದ ಸಲಹೆ ನೀಡಿದ್ದರು ? ಅದೇನೆಂದರೆ, “ದೇಹ ರಚನೆಯ ವಿಷಯದಲ್ಲಿ ಕೆಲವು ರೀತಿಯ ಕೊರತೆ ಇರುವ ಕಾರಣ ಅಥವಾ ಅಂಗಾಂಗಗಳು ಇಲ್ಲದಿರುವ ಜನರನ್ನು ನಾವು ಅಂಗವಿಕಲರು ಎಂದು ಕರೆಯುತ್ತೇವೆ, ಜತೆಗೆ ಆ ರೀತಿಯೇ ನಾವೆಲ್ಲರೂ ಭಾವಿಸಿದ್ದೇವೆ. ಆದರೆ, ವಾಸ್ತವವಾಗಿ ನಾವು ಅವರೊಂದಿಗೆ ಬೆರೆತು ಸಂವಹನ ಅಥವಾ ಮಾತುಕತೆ ನಡೆಸಿದಾಗ ಮಾತ್ರ ನಮಗೆ ಅರಿವಾಗುತ್ತದೆ. ಅದೇನೆಂದರೆ, ನಮ್ಮ ಕಣ್ಣುಗಳಿಂದ ನೋಡಲಾಗದ ಕೆಲವು ವಿಭಿನ್ನ ಮತ್ತು ವಿಶಿಷ್ಟವಾದ ಶಕ್ತಿಯನ್ನು ದೇವರು ಅವರಿಗೆ ದಯ ಪಾಲಿಸಿದ್ದಾನೆ. ನಾವು ಅವರ ಕೆಲಸವನ್ನು ಕಣ್ಣಾರೆ ನೋಡಿದಾಗ ಮಾತ್ರ ಅವರ ಪ್ರತಿಭೆಯನ್ನು ಅರಿತುಕೊಳ್ಳುತ್ತೇವೆ. ಹಾಗಾಗಿ, ನಮ್ಮ ದೇಶದಲ್ಲಿ ‘ವಿಕಲಾಂಗ’ ಎಂಬ ಪದದ ಬದಲಿಗೆ ‘ದಿವ್ಯಾಂಗ’ ಎಂಬ ಪದವನ್ನು ಏಕೆ ಬಳಸಬಾರದು ಎಂದು ನಾನು ಯೋಚಿಸಿದೆ”
ಅಂಗವೈಕಲ್ಯ ಕ್ಷೇತ್ರದಲ್ಲಿ ಎಲ್ಲರನ್ನೂ ಒಳಗೊಂಡ ಪ್ರಗತಿ ಮತ್ತು ಎಲ್ಲರಿಗೂ ಪ್ರವೇಶ ಕಲ್ಪಿಸುವ ಅವಕಾಶಕ್ಕೆ ಇದು ಕ್ರಾಂತಿಕಾರಿ ವಿಧಾನದ ಪ್ರಾರಂಭವಾಗಿದೆ. ಇದು ಈ ಮಾಧ್ಯಮದ ಶಕ್ತಿ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ, ಇದನ್ನು ಪ್ರಧಾನಿ ಅರಿತುಕೊಂಡಿದ್ದಾರೆ ಮತ್ತು ಆಂತರಿಕಗೊಳಿಸಿದ್ದಾರೆ.
ಈ ಕ್ಷೇತ್ರದೊಂದಿಗಿನ ನನ್ನ ಒಡನಾಟ ೩ ದಶಕಗಳಿಗೂ ಹೆಚ್ಚಿನದ್ದಾಗಿದೆ. ಗಾಲಿಕುರ್ಚಿಯ ಮೇಲೆ ಕುಳಿತುಕೊಂಡೇ ನಾನು ಬದುಕು ಸಾಗಿಸುತ್ತಾ, ದಿವ್ಯಾಂಗರ ನಾನಾ ಸಮಸ್ಯೆಗಳನ್ನು ನೋಡುತ್ತಾ ಬಂದಿದ್ದೇನೆ. ಇದೀಗ ದಿವ್ಯಾಂಗರ ವಿಷಯಕ್ಕೆ ಬಂದಾಗ, ರಾಷ್ಟ್ರವು ಕೆಲವು ಒತ್ತಡದ ಸವಾಲುಗಳನ್ನು ಎದುರಿಸುತ್ತಿದೆ ಎಂಬುದನ್ನು ಸಹ ನಾನು ಗಮನಿಸಿದ್ದೇನೆ. ಮೂರು ಪ್ರಮುಖ ಸವಾಲುಗಳೆಂದರೆ, ಅನುತ್ಪಾದಕತೆ, ಶಿಕ್ಷಣ ಮತ್ತು ಪ್ರವೇಶಾವಕಾಶ. ಆದಾಗ್ಯೂ, ಕಳೆದ ೧ ದಶಕದಲ್ಲಿ, ನಮ್ಮ ಪ್ರಧಾನಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶದಲ್ಲಿ ಒಂದು ಮಾದರಿ ಬದಲಾವಣೆ ಕಂಡುಬಂದಿದೆ. ’ಸಬ್ಕಾ ಸಾಥ್, ಸಬ್ಕಾ ವಿಕಾಸ್ ದೃಷ್ಟಿಕೋನದೊಂದಿಗೆ ೨೦೧೫ ಡಿಸೆಂಬರ್ ೩ರಂದು ಪ್ರಾರಂಭವಾದ ಪ್ರವೇಶಾವಕಾಶ (ಲಭ್ಯತೆಯ ಅವಕಾಶ) ಭಾರತ ಅಭಿಯಾನವು ವಿಶೇಷಚೇತನರಿಗೆ ಎಲ್ಲ ವಲಯಗಳಲ್ಲಿ ಭಾಗವಹಿಸಲು ಮತ್ತು ಸ್ವತಂತ್ರವಾಗಿ ಬದುಕಲು ಸಮಾನ ಅವಕಾಶ ಒದಗಿಸುವ ದಿಕ್ಕಿನಲ್ಲಿ ತೆಗೆದುಕೊಂಡ ಮಹತ್ವದ ಹೆಜ್ಜೆಯಾಗಿದೆ.
ದಿವ್ಯಾಂಗರ ಏಳಿಗೆಗಾಗಿ ಸರ್ಕಾರ ತಂದಿರುವ ನೀತಿಗಳ ಜತೆಗೆ, ಅಂತಹ ಜನರ ಸುತ್ತ ನಿರೂಪಣೆಯಲ್ಲಿ ಬದಲಾವಣೆ ತರುವುದು ಸಹ ಅಷ್ಟೇ ಅಗತ್ಯವಾಗಿದೆ. ನಾನು ಅದನ್ನು ಈ ರೀತಿ ಕರೆಯಲು ಇಷ್ಟಪಡುತ್ತೇನೆ, “ನಡೆವಳಿಕೆ ಅಥವಾ ವರ್ತನೆಗಳ ಬದಲಾವಣೆಗಾಗಿ ಸಾಮೂಹಿಕ ಸಮರ್ಥನೆ”. ಮನ್ ಕಿ ಬಾತ್ ರೇಡಿಯೊ ಭಾಷಣದ ೭ ವರ್ಷಗಳ ನಂತರ ಇಂದು ವಿಶೇಷಚೇತನರ ಬಗೆಗಿನ ಜನರ ಬದಲಾದ ಮನೋಭಾವವು ಸಮಾಜದಲ್ಲಿ ಸಾಕಷ್ಟು ಸ್ಪಷ್ಟವಾಗಿ ಗೋಚರಿಸುತ್ತಿದೆ. ’ಮನ್ ಕಿ ಬಾತ್ ಕಾರ್ಯಕ್ರಮವು ನಮ್ಮ ಪ್ರಧಾನ ಮಂತ್ರಿ ಅವರನ್ನುಜನಸಾಮಾನ್ಯರೊಂದಿಗೆ ನೇರವಾಗಿ ಸಂಪರ್ಕ ಕಲ್ಪಿಸುತ್ತದೆ. ಅಲ್ಲಿ ಅವರು ವಿವಿಧ ಕ್ಷೇತ್ರಗಳ ಬಗ್ಗೆ, ವಿವಿಧ ಸಮಸ್ಯೆಗಳ ಬಗ್ಗೆ ವ್ಯಾಪಕವಾಗಿ ಸಂವಹನ ನಡೆಸುತ್ತಾರೆ. ಇದು ಜನರನ್ನು, ಸಂಘ ಸಂಸ್ಥೆಗಳನ್ನು ತಮ್ಮ ಕ್ಷೇತ್ರಗಳಲ್ಲಿ ಮತ್ತಷ್ಟು ಶಕ್ತಿಶಾಲಿಯಾಗಿ ಕೆಲಸ ಮಾಡಲು ಶಕ್ತಿ, ಚೈತನ್ಯ ಮತ್ತು ಸ್ಫೂರ್ತಿಯನ್ನು ತರುತ್ತದೆ. ಇದು ಮಾಧ್ಯಮ, ಶಿಕ್ಷಣ ಅಥವಾ ಕ್ರೀಡೆಯಂತಹ ವಿವಿಧ ಕ್ಷೇತ್ರಗಳಲ್ಲಿ ವಿಶೇಷಚೇತನರ ಬಗೆಗಿನ ಸಾರ್ವಜನಿಕ ಗ್ರಹಿಕೆಯನ್ನು ಬದಲಾಯಿಸಲು ಸಹಾಯ ಮಾಡಿದೆ, ಇದಕ್ಕಾಗಿ ಹಲವಾರು ಪ್ಯಾರಾ ಅಥ್ಲಿಟ್(ಪ್ಯಾರಾ ಒಲಿಂಪಿಯನ್)ಗಳು ಪ್ರಧಾನ ಮಂತ್ರಿ ಅವರಿಗೆ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ.
ದಿವ್ಯಾಂಗರಿಗೆ ಸಹಾಯ ಮಾಡಬಹುದಾದ ಹೊಸ ಹೊಸ ವಿಚಾರಗಳಿಗೆ ಆಹ್ವಾನ ನೀಡುವುದರಿಂದ ಹಿಡಿದು ಅವರಿಗೆ ಅಸ್ತಿತ್ವದಲ್ಲಿರುವ ಉಪಕ್ರಮಗಳು ಮತ್ತು ನೀತಿಗಳ ಬಗ್ಗೆ ಜಾಗೃತಿ ಹೆಚ್ಚಿಸುವ ತನಕ ಹಲವು ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲಲು ಪ್ರಧಾನ ಮಂತ್ರಿ ಅವರು ’ಮನ್ ಕಿ ಬಾತ್ ವೇದಿಕೆಯನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಾರೆ. ದೇಶದಲ್ಲಿ ನಡೆಯುತ್ತಿರುವ ಹೊಸತನದ ಮತ್ತು ಸ್ಫೂರ್ತಿದಾಯಕ ಉಪಕ್ರಮಗಳು ಎಷ್ಟೇ ಚಿಕ್ಕವಿರಲಿ, ಅವುಗಳನ್ನು ಸಹ ಅವರು ತಮ್ಮ ರೇಡಿಯೊ ಭಾಷಣದಲ್ಲಿ ಮುಂಚೂಣಿಗೆ ತರುತ್ತಾರೆ. ೨೦೨೨ ನವೆಂಬರ್ ೨೭ರಂದು ಪ್ರಸಾರವಾದ ಮನ್ ಕಿ ಬಾತ್ ೯೫ನೇ ಸಂಚಿಕೆಯಲ್ಲಿ ಬೆಳಕು ಚೆಲ್ಲಿದ ಸ್ನಾಯು ರೋಗ(ಮಸ್ಕ್ಯುಲರ್ ಡಿಸ್ಟ್ರೋಫಿ), ಸ್ನಾಯುವಿನ ದೌರ್ಬಲ್ಯ ಹಾಗು ಕ್ಷೀಣಿಸುವಿಕೆಗೆ ಕಾರಣವಾಗುವ ಆನುವಂಶಿಕ ಕಾಯಿಲೆಯ ಉದಾಹರಣೆ ತೆಗೆದುಕೊಳ್ಳಿ, ಅಂದು ಪ್ರಧಾನಿ ಅವರು ನಮ್ಮ ಸಂಸ್ಥೆ ಇಂಡಿಯನ್ ಅಸೋಸಿಯೇಷನ್ ಆಫ್ ಮಸ್ಕ್ಯುಲರ್ ಡಿಸ್ಟ್ರೋಫಿಯ ಕಾರ್ಯಸಾಧನೆಗಳ ಬಗ್ಗೆ ಮಾತನಾಡಿದರು. ನಮ್ಮ ಸಂಸ್ಥೆಯು ದೇಶಾದ್ಯಂತ ಸ್ನಾಯುರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ನಾವು ಸಾಗಬೇಕಾದ ದೂರ ಬಹಳವಿದೆ. ಆದರೂ, ವಿಶೇಷಚೇತನರ ಜೀವನ ಮತ್ತು ಹಕ್ಕುಗಳ ಬಗೆಗಿನ ನವೀಕೃತ ಆಸಕ್ತಿಯು ನಮ್ಮನ್ನು ಯಶಸ್ಸಿನ ಹೊಸ ಎತ್ತರಕ್ಕೆ ಕೊಂಡೊಯ್ಯುಲಿದೆ.
“ಒಂದು ಭೂಮಿ – ಒಂದು ಕುಟುಂಬ – ಒಂದು ಭವಿಷ್ಯ ಎಂಬ ಘೋಷವಾಕ್ಯದೊಂದಿಗೆ ಜಿ-೨೦ ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವ ಭಾರತಕ್ಕೆ, ಪ್ರಗತಿ ಮತ್ತು ಅಭಿವೃದ್ಧಿಯ ಸುತ್ತಲಿನ ಚರ್ಚೆಗಳಲ್ಲಿ ವಿಶೇಷಚೇತನರ ಸೇರ್ಪಡೆಗೆ ಆದ್ಯತೆ ನೀಡುವ ಅವಕಾಶ ಒದಗಿಸಿದೆ. ಎಲ್ಲರನ್ನೂ ಒಳಗೊಂಡ ಪ್ರಗತಿ ಮತ್ತು ಎಲ್ಲರಿಗೂ ಪ್ರವೇಶಾವಕಾಶ ಉತ್ತೇಜಿಸಲು ಶೃಂಗಸಭೆಯು ಭಾರತಕ್ಕೆ ಜಾಗತಿಕ ಸರದಾರನ ಸ್ಥಾನ ನೀಡುತ್ತದೆ – ಭಾರತವು ಸ್ವಾತಂತ್ರ್ಯೋತ್ಸವದ ಶತಮಾನೋತ್ಸವಕ್ಕೆ ಸಮೀಪಿಸುತ್ತಿರುವಾಗ ಇಡುವ ಉದಾತ್ತ ಗುರಿಯಾಗಿದೆ. ಈ ನಿಟ್ಟಿನಲ್ಲಿ, ಪ್ರತಿ ತಿಂಗಳ ೧೧ನೇ ತಾರೀಖನ್ನು “ವಿಶೇಷಚೇತನರ ವಿಶೇಷ ದಿನ” ಎಂದು ಗೊತ್ತುಪಡಿಸುವ ೧ ವರ್ಷದ ಅಭಿಯಾನ ಕಾರ್ಯಗತಗೊಳಿಸಲು ಸೂಚಿಸಲಾಗಿದೆ. ಈ ದಿನವು ಉದ್ಯೋಗಗಳನ್ನು ನೀಡುವ ಮೂಲಕ, ಧೈರ್ಯ ಮತ್ತು ಉಪಕ್ರಮಗಳ ಯಶೋಗಾಥೆಗಳನ್ನು ಹಂಚಿಕೊಳ್ಳುವ ಮೂಲಕ ವಿಶೇಷಚೇತನರನ್ನು ಸ್ಮರಿಸಲು, ಆಚರಿಸಲು ಮತ್ತು ಬೆಂಬಲಿಸುವ ಒಂದು ಸುಸಂದರ್ಭವಾಗಿದೆ. ಈ ಎಲ್ಲ ಆಲೋಚನೆಗಳನ್ನು ಪ್ರಾರಂಭಿಸಲು ’ಮನ್ ಕಿ ಬಾತ್ ಗಿಂತ ಉತ್ತಮ ವೇದಿಕೆ ಮತ್ತೊಂದಿಲ್ಲ. ಸಾಂಕೇತಿಕ ದಿನಾಂಕವಾಗಿ ೧೧ರ ಆಯ್ಕೆಯು ಸಣ್ಣ ಪ್ರಯತ್ನಗಳನ್ನು ಸಂಯೋಜಿಸಿದಾಗ ಗಮನಾರ್ಹ ಫಲಿತಾಂಶಗಳನ್ನು ನೀಡುತ್ತದೆ ಎಂಬ ಪರಿಕಲ್ಪನೆಯನ್ನು ಸೂಚಿಸುತ್ತದೆ. ಹೀಗಾಗಿ, ಅಂಗವೈಕಲ್ಯ ಹಕ್ಕುಗಳು ಮತ್ತು ಸೇರ್ಪಡೆಯನ್ನು ಉತ್ತೇಜಿಸುವ ಪ್ರತಿಯೊಂದು ಕೊಡುಗೆಯು ಮೌಲ್ಯಯುತವಾಗಿದೆ, ಅದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು.
ಮುಂಬರುವ ‘ಮನ್ ಕಿ ಬಾತ್ನ ೧೦೦ನೇ ಸಂಚಿಕೆಗಾಗಿ ಮತ್ತು ರಾಷ್ಟ್ರೀಯ ಮಹತ್ವದ ವಿವಿಧ ವಿಷಯಗಳ ಕುರಿತು ನಮ್ಮ ಪ್ರಧಾನಿ ಅವರ ಬುದ್ಧಿವಂತಿಕೆಯ ಮಾತುಗಳನ್ನು ಕೇಳಲು ನಾನು ಎದುರು ನೋಡುತ್ತಿದ್ದೇನೆ. ನಮ್ಮೆಲ್ಲರಲ್ಲಿ ’ಮಾಡಬಹುದು’ ಎಂಬ ಮನೋಭಾವ ಹುಟ್ಟುಹಾಕುತ್ತಿರುವ ಸರ್ಕಾರದ ಕಾರ್ಯಕ್ರಮಗಳು, ಉಪಕ್ರಮಗಳ ಬಗ್ಗೆ ’ಮನ್ ಕಿ ಬಾತ್ನಲ್ಲಿ ಮಾತನಾಡುವುದನ್ನು ಮತ್ತು ವೈಶಿಷ್ಟ್ಯಗೊಳಿಸುವುದನ್ನು ಪ್ರಧಾನಿ ಮುಂದುವರಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ. ನಾವು ’ಅಮೃತ ಕಾಲ’ಕ್ಕೆ ಕಾಲಿಡುತ್ತಿದ್ದಂತೆ, ಪ್ರಧಾನಿ ನೀಡಿದ ’ಪಂಚ ಪ್ರಾಣ’ವನ್ನು ಪೂರೈಸುವ, ಎಲ್ಲರನ್ನೂ ಒಳಗೊಂಡ ಭಾರತವನ್ನು ನಿರ್ಮಿಸುವ ಉತ್ಸಾಹವನ್ನು ಇಡೀ ದೇಶವೇ ತುಂಬಿಕೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ.
ಲೇಖಕರ ಟಿಪ್ಪಣಿ: ರಾಷ್ಟ್ರೀಯ ಅಂಗವಿಕಲರ ಉದ್ಯೋಗ ಉತ್ತೇಜನಾ ಕೇಂದ್ರದಿಂದ ಮಾಹಿತಿ ಪಡೆದು, ಈ ಲೇಖನ ಬರೆಯಲಾಗಿದೆ.
’ಮನ್ ಕಿ ಬಾತ್’ ಕಾರ್ಯಕ್ರಮದ ಶಕ್ತಿ: ಎಲ್ಲರನ್ನೂ ಒಳಗೊಂಡ ಪ್ರಗತಿ ಮತ್ತು ಎಲ್ಲರಿಗೂ ಪ್ರವೇಶ (ಲಭ್ಯತೆ) ಅವಕಾಶ ಕಲ್ಪಿಸುವ ಕಡೆಗಿನ ಭಾರತದ ಪಯಣಕ್ಕೆ ರೂಪು ನೀಡುತ್ತಿದೆ
RELATED ARTICLES