ನವದೆಹಲಿ: ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ಹಿಂದೆ ಸೋಂಕು ಹೆಚ್ಚಾದ ಸಮಯದಲ್ಲಿ ಕಾರ್ಯೋನ್ಮುಖರಾದಂತೆ ಕೇಂದ್ರ ಮತ್ತು ರಾಜ್ಯಗಳು ಸಹಕಾರ ಮನೋಭಾವದಿಂದ ಕೆಲಸ ಮಾಡುವುದನ್ನು ಮುಂದುವರಿಸಬೇಕಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಕೊರೊನಾವೈರಸ್ ( Coronavirus ) ಪ್ರಕರಣಗಳ ಮಧ್ಯೆ, ಕೇಂದ್ರ ಸಚಿವರು ( Mansukh Mandaviya ) ಶುಕ್ರವಾರ ವಿವಿಧ ರಾಜ್ಯಗಳ ಪರಿಶೀಲನಾ ಸಭೆ ನಡೆಸಿದರು. ರಾಜ್ಯಗಳು ಕೊರೊನಾ ವೈರಸ್ ಬಗ್ಗೆ ಜಾಗರೂಕರಾಗಿರಿ ಮತ್ತು ಕೋವಿಡ್-19 ( COVID-19) ನಿರ್ವಹಣೆಗೆ ಸಿದ್ಧರಾಗಿರಿ ಎಂದು ಕಿವಿಮಾತು ಹೇಳಿದ್ದಾರೆ.
ಆನ್ಲೈನ್ ಮೂಲಕ ರಾಜ್ಯ ಆರೋಗ್ಯ ಸಚಿವರು ಮತ್ತು ಪ್ರಧಾನ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಡೆಸಿ ಸಭೆಯಲ್ಲಿ, ಮಾಂಡವಿಯಾ ಅವರು ಇನ್ಫ್ಲುಯೆನ್ಸ ತರಹದ ಅನಾರೋಗ್ಯ (ಐಎಲ್ಐ) ಮತ್ತು ತೀವ್ರ ತರವಾದ ಉಸಿರಾಟದ ಸೋಂಕಿನ (ಎಸ್ಎಆರ್ಐ) ಪ್ರಕರಣಗಳ ಪ್ರವೃತ್ತಿಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ತುರ್ತು ಹಾಟ್ಸ್ಪಾಟ್ಗಳನ್ನು ಗುರುತಿಸಬೇಕು, ಪರೀಕ್ಷೆ ಮತ್ತು ಲಸಿಕೆಯನ್ನು ಹೆಚ್ಚಿಸಬೇಕು. ಆಸ್ಪತ್ರೆಯ ಮೂಲಸೌಕರ್ಯಗಳ ಸಿದ್ಧತೆಯನ್ನು ಖಾತ್ರಿಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಆನ್ ಲೈನ್ ಮೂಲಕ ಸಭೆ ನಡೆಸಿದ ಕೇಂದ್ರ ಸಚಿವ ಜೀನೋಮ್ ಅನುಕ್ರಮವನ್ನು ಹೆಚ್ಚಿಸುವುದರ ಜೊತೆಗೆ ಸಕಾರಾತ್ಮಕ ಮಾದರಿಗಳ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಹೆಚ್ಚಿಸುವುದು, ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸಲು ಒತ್ತು ನೀಡುವಂತೆ ಹೇಳಿದ್ದಾರೆ.
23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರತಿ ಮಿಲಿಯನ್ಗೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಸರಾಸರಿ ಪರೀಕ್ಷೆಗಳನ್ನು ಹೊಂದಿವೆ ಎಂದು ಗಮನಿಸಲಾಗಿದೆ. ಹೊಸ ಕೋವಿಡ್ (COVID) ರೂಪಾಂತರಗಳನ್ನು ಲೆಕ್ಕಿಸದೆಯೇ, ‘ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಟ್ ಮತ್ತು ಕೋವಿಡ್ ಸೂಕ್ತ ನಡವಳಿಕೆಯ ಅನುಸರಣೆ’ ಎಂಬ ಐದು ಪಟ್ಟು ಕಾರ್ಯತಂತ್ರವು ಕೋವಿಡ್ ನಿರ್ವಹಣೆಗೆ ಪರೀಕ್ಷಿತ ಕಾರ್ಯತಂತ್ರವಾಗಿ ಮುಂದುವರಿಯುತ್ತದೆ ಎಂದು ಡಾ. ಮಾಂಡವಿಯಾ ಹೇಳಿದರು.
ಇದು ಸೂಕ್ತ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದ ಅವರು ಏಪ್ರಿಲ್ 7ಕ್ಕೆ ಕೊನೆಗೊಳ್ಳುವ ವಾರದಂತೆ, ಪ್ರತಿ ಮಿಲಿಯನ್ಗೆ 100 ಪರೀಕ್ಷೆಗಳ ಪ್ರಸ್ತುತ ದರವನ್ನು ತ್ವರಿತವಾಗಿ ಹೆಚ್ಚಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಲಾಗಿದೆ. ಪರೀಕ್ಷೆಗಳಲ್ಲಿ ಆರ್ ಟಿ ಪಿಆರ್ (RT-PCR) ಪಾಲನ್ನು ಹೆಚ್ಚಿಸಲು ಅವರಿಗೆ ಸಲಹೆ ನೀಡಲಾಗಿದೆ.