Friday, June 2, 2023
Homeಇದೀಗ ಬಂದ ತಾಜಾ ಸುದ್ದಿ56 ವರ್ಷ ಜತನದಿಂದ ಪತ್ರಿಕೆ ನಡೆಸಿದ ಅಮ್ಮನಿಗೆ ಅಕಾಡೆಮಿ ಪ್ರಶಸ್ತಿ ಅರಸಿ ಬಂತು...

56 ವರ್ಷ ಜತನದಿಂದ ಪತ್ರಿಕೆ ನಡೆಸಿದ ಅಮ್ಮನಿಗೆ ಅಕಾಡೆಮಿ ಪ್ರಶಸ್ತಿ ಅರಸಿ ಬಂತು…

ಅಮ್ಮಾ ನಿಮಗೆ ಅಭಿನಂದನೆಗಳು.
ನಿಮ್ಮನ್ನು ನೋಡಲು ಬರಬಹುದೇ? ಎಂದೆ. ಅದಕ್ಕೇನಂತೆ? ಈಗಾಗಲೇ ಬಾ ಎಂದರು.‌‌
ತಡ ಮಾಡದೆ ಗಡಿಬಿಡಿಯಲ್ಲಿ ಹೊರಡುತ್ತಿರುವುದನ್ನು ನೋಡಿದ ಮಡದಿ ಏನು ಎತ್ತ ಎಂದು ವಿಚಾರಿಸಿದಳು. ಅಮ್ಮನಿಗೆ ಸೊಪ್ಪಿನ ಸಾರು ಮಾಡಿರುವೆ ಕೊಟ್ಟು ಬನ್ನಿ ಎಂದು ಟಿಫಿನ್ ಕ್ಯಾರಿಯರ್ ಕೂಡ ಕೊಟ್ಟಳು.

ಬೆಂಗಳೂರು ಪ್ಯಾಲೇಸ್ ಗುಟ್ಟಳ್ಳಿ ಸರ್ಕಲ್ ಬಳಿ ಕಾರು ನಿಲ್ಲಿಸಿ ಪೋನಾಯಿಸಿದೆ. ಅಲ್ಲಿಯೇ ವಾಕಬಲ್ ಡಿಸ್ಟೆನ್ಸ್ ನಲ್ಲಿ ಅವರ ಮನೆ.

ಕಳೆದ ಕಾಲು ಶತಮಾನ (25 ವರ್ಷ)ದಿಂದ
ಅದೇ ಮನೆಯಲ್ಲಿ ವಾಸ. ಇಷ್ಟು ಸುಧೀರ್ಘ ಅವಧಿಯಲ್ಲಿ ಬಾಡಿಗೆ ಮನೆಯಲ್ಲಿ ಇರುವುದು ಅಪರೂಪ. ಮೆಟ್ಟಿಲು ಹತ್ತಿ ಮೊದಲ ಮಹಡಿ ತಲುಪಿದಾಗ, ಅಲ್ಲಿ ನನಗಾಗಿ ಕಾಯ್ದಿದ್ದ ಹಿರಿಯ ಜೀವ, ಮನೆಯೊಳಗೆ ಕರೆದು ಕೂರಿಸಿ ಉಭಯಕುಶಲೋಪರಿಯಲ್ಲಿ ತೊಡಗಿತು.

ಅರೆ,
ಅರವತ್ತು ವರ್ಷಗಳ ಕಾಲ ಸದರ್ನ್ ಎಕನಾಮಿಸ್ಟ್ ಮ್ಯಾಗಜೀನ್ ಅನ್ನು ತನ್ನ ಸಂಪಾದಕತ್ವದಲ್ಲಿ ಹೊರ ತಂದಿರುವ, ಈ ಇಳಿ ವಯಸ್ಸಿನಲ್ಲಿ ಬತ್ತದ ಉತ್ಸಾಹದ ಬುಗ್ಗೆಯಾಗಿರುವ, ತೊಂಬತ್ತನೇ ವಸಂತಕ್ಕೆ ಕಾಲಿಡುತ್ತಿರುವ ಗಟ್ಟಿಗಿತ್ತಿ ಮಹಿಳೆ ಯಾರು ಅಂತಿರಾ?
ಹೌದು. ಅವರೇ ಸುಶೀಲಾ ಸುಬ್ರಹ್ಮಣ್ಯ.

ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿದ್ದ ಕೆ.ಎನ್.ಸುಬ್ರಹ್ಮಣ್ಯ ಅವರು ಆರಂಭಿಸಿದ ಸದರ್ನ್ ಎಕನಾಮಿಸ್ಟ್ ಮ್ಯಾಗಜೀನ್, ಅರ್ಥಿಕ ‌ವಿಷಯಗಳಿಗೆ ಸೀಮಿತವಾಗಿದೆ ಎನ್ನುವುದು ವಿಶೇಷ. ಪತ್ರಿಕೆ ಪ್ರಾರಂಭಿಸಿದ ನಾಲ್ಕು ವರ್ಷಗಳಲ್ಲಿ ಸುಬ್ರಹ್ಮಣ್ಯ ಕೊನೆಯುಸಿರೆಳೆದರು. ನಂತರ ತಮ್ಮ ಸಂಪಾದಕತ್ವದಲ್ಲಿ ಮ್ಯಾಗಜೀನ್ ತರಲು ತೀರ್ಮಾಸಿ‌ ನಾಲ್ಕಾಣೆಗೆ ಪತ್ರಿಕೆ ನೀಡಿ, ಓದುಗರ ಬಲವನ್ನು ಹೆಚ್ಚಿಸಿಕೊಂಢರು. ಓದುಗರನ್ನು ನಂಬಿಯೇ 56 ವರ್ಷಗಳ ಕಾಲ ಪತ್ರಿಕೆ ನಡೆಸಿದ ಹಿರಿಮೆ ಮತ್ತು ಹೆಗ್ಗಳಿಕೆ ಸುಶೀಲಾ ಅವರದು.

ತಮ್ಮ ಸಂಪಾದಕತ್ವದಲ್ಲಿ ಸದರನ್ ಎಕನಾಮಿಸ್ಟ್ ಆಂಗ್ಲ ನಿಯತಕಾಲಿಕೆಯನ್ನು 56 ವರ್ಷಗಳ ಕಾಲ ಮಹಿಳೆಯಾಗಿ ಮುನ್ನಡೆಸಿದರೂ ಅವರು ದಣಿದಿಲ್ಲ.
ಕೋವಿಡ್ ಸಂದರ್ಭದಲ್ಲಿಯೂ ಪ್ರಕಟಣೆ ಹೊರತರುವ ಮೂಲಕ ಸಾಹಸವನ್ನೇ ಮಾಡಿದರು.

ಭಾರತದ ಆರ್ಥಿಕ ವ್ಯವಸ್ಥೆಯ ಹಲವು ವಿಚಾರಸಂಕಿರಣಗಳಲ್ಲಿ ಭಾಗವಹಿಸಿದ್ದು, ಹಲವು ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸ ನೀಡಿರುವ ಹಿರಿಮೆ ಅವರದು. ಪ್ರಧಾನಿಯಾಗಿದ್ದ ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಅವರ ಜೊತೆಯಲ್ಲಿ ಸಂವಾದ ನಡೆಸಿರುವುದು ಕನ್ನಡ ನಾಡಿಗೆ ಹೆಮ್ಮೆ ತರುವಂತಹ ಸಂಗತಿ.
ಅಷ್ಟೇ ಅಲ್ಲ ಮಹಿಳಾ ಪತ್ರಕರ್ತೆಯಾಗಿ ಸುದ್ದಿಮನೆಯಲ್ಲಿ ತಮ್ಮದೇ ಛಾಪು ದಾಖಲಿಸಿದ್ದಾರೆ.

ಈ ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿ ನಿಯತಕಾಲಿಕೆಯನ್ನು ಹೊರತರುತ್ತಿರುವ ಸುಶೀಲ ಅವರು, ಹಲವು ಸಂಘಸಂಸ್ಥೆಗಳ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

ಸುದ್ದಿಮನೆಯ ಹಿರಿಯಕ್ಕೆ ಸುಶೀಲ ಅವರು ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಸುಧೀರ್ಘ ಸೇವೆಯನ್ನು ಗುರುತಿಸಿ 75ನೇ ಅಮೃತ ಸ್ವತಂತ್ರ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಾವೆಲ್ಲರೂ, ಗುಟ್ಟಹಳ್ಳಿಯಲ್ಲಿರುವ ಅವರ ಕಚೇರಿಗೆ ತೆರಳಿ ಸನ್ಮಾನಿಸಿದ್ದೆವು.

ಹಾಸನದಲ್ಲಿ ವಿದ್ಯಾಭ್ಯಾಸ:
1934ರಲ್ಲಿ ಹಾಸನದ ಕೆ.ಆರ್. ಪುರಂನಲ್ಲಿ ಜನಿಸಿದ ಸುಶೀಲ ಅವರು, ಗೌರಿಪುರ ಶ್ಯಾನುಬೋಗರ ಮಗಳಾದ ಕಾರಣ ಓದಿಗೆ ಕೊರತೆಯಾಗಲಿಲ್ಲ. ಹಾಸನದ
ಸೇಂಟ್ ಫಿನೋಮಿನಾ ಮಿಡಲ್ ಸ್ಕೂಲ್‌ನಲ್ಲಿ, ಸರ್ಕಾರಿ ಬಾಲಕೀಯರ ಪ್ರೌಢಶಾಲೆ, ಸರ್ಕಾರಿ ಇಂಟರ್ ಮೀಡಿಯಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ, ಮೈಸೂರಿನಲ್ಲಿ ಉನ್ನತ ಶಿಕ್ಷಣ ಮಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕೆ.ಎನ್. ಸುಬ್ರಹ್ಮಣ್ಯ ಅವರ ಹೆಸರಿನಲ್ಲಿ ದತ್ತಿ ನಿಧಿಯನ್ನು ಇಟ್ಟಿದ್ದು, ಪ್ರತಿ ವರ್ಷ ಸಮ್ಮೇಳನದ ಸಂದರ್ಭದಲ್ಲಿ ಆಂಗ್ಲ ಪತ್ರಿಕೆಯ ಪ್ರತಿಭಾನ್ವಿತ ಪತ್ರಕರ್ತರಿಗೆ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದೆ.

ಹಾಗೆ ಮಾತು ಮುಂದುವರಿಯಿತು…
ವಿಜಯಪುರದಲ್ಲಿ ಪತ್ರಕರ್ತರ ಸಮ್ಮೇಳನ ಬಹಳ ಜೋರಾಗಿ ನಡೆಯಿತು ಎಂದು‌ ಕೇಳಿ ಸಂತೋಷವಾಯಿತು ಎಂದರು ಅಮ್ಮ. ಕೆಯುಡಬ್ಲ್ಯೂಜೆ ನಮ್ಮ ಪತ್ರಕರ್ತರ ಹೆಮ್ಮೆಯ ಸಂಘಟನೆ. ಅಚ್ಚುಕಟ್ಟಾಗಿ ನಡೆಸಬೇಕು ಎಂದು ಹಾರೈಸಿದರು.

ಅಕಾಡೆಮಿ ವಿಶೇಷ ಪ್ರಶಸ್ತಿಗೆ ಭಾಜನರಾಗಿರುವ ಅಮ್ಮನಿಗೆ ಶಾಲು ಹೊದಿಸಿ, ಹಾರ ಹಾಕಿ, ಸಮ್ಮೇಳನದ ಬ್ಯಾಗ್ ನೀಡಿ‌ ಸತ್ಕರಿಸಿದೆ.

ನಿಮ್ಮ ಕೆಲಸ‌‌ ಹೇಗೆ ‌ನಡೆದಿದೆ? ಎಂದು ಕೇಳಿದೆ. ಈಗಷ್ಟೇ ಎಡಿಷನ್ ಮುಗಿಸಿ, ಪ್ರಿಂಟಿಂಗ್ ಗೆ ಕಳುಹಿಸಿದೆ ಎಂದಾಗ ನಿಜಕ್ಕೂ ನನಗೆ ಅಚ್ಚರಿ. ತೊಂಬತ್ತರ ಹರೆಯದಲ್ಲಿ ಪತ್ರಿಕೆ ತರುವ ಅವರ ಕ್ರಿಯಾಶೀಲ ಮನಸ್ಸು ನೋಡಿ ಮನದುಂಬಿ‌ ಬಂತು.

ಹಾಸನದ ಕಡೆಗೆ ಹೋಗಿದ್ರಾ
ಎಂದು ತವರು ನೆನೆದರು. ಟೀ ಜೊತೆಗೆ ಬಹಳ ಹೊತ್ತು ಹರಟಿದ್ದು ಗೊತ್ತಾಗಲೇ ಇಲ್ಲ. ನನಗೂ ಕಚೇರಿಗೆ ಹೊತ್ತಾಯಿತು ಎಂದು ಹೊರಟೆ. ಆಚೆಗೆ ಬಂದು ಮಹಡಿಯಲ್ಲಿ ನಿಂತು ನಾ ದಾರಿಯಾಚೆ ಮರೆಯಾಗುವ ತನಕ ನೋಡುತ್ತಲೇ ಇದ್ದರು. ಯಾವುದನ್ನು ಬಯಸದ ನಿರ್ಮಲ ಹೃದಯದ ಸುಶೀಲಾ ಅಮ್ಮನ ಮನೆಗೆ ಮಾಧ್ಯಮ ಅಕಾಡೆಮಿ ವಿಶೇಷ ಪ್ರಶಸ್ತಿ ಹರಸಿಬಂದಿರುವುದು, ಆ ಪ್ರಕ್ರಿಯೆಯಲ್ಲಿ ನಾನು ಭಾಗವಾಗಿರುವುದು ಹೆಮ್ಮೆ ಅನ್ನಿಸಿತು.

RELATED ARTICLES
- Advertisment -
Google search engine

Most Popular

Recent Comments