Tuesday, June 6, 2023
Homeಇದೀಗ ಬಂದ ತಾಜಾ ಸುದ್ದಿಸುದ್ದಿಮನೆ ಹಿರಿಯಕ್ಕ ಹಾಸನದ ಸುಶೀಲ ಸುಬ್ರಹ್ಮಣ್ಯ ಅವರಿಗೆ ಮಾಧ್ಯಮ ಅಕಾಡೆಮಿಯ ವಿಶೇಷ ಪ್ರಶಸ್ತಿ

ಸುದ್ದಿಮನೆ ಹಿರಿಯಕ್ಕ ಹಾಸನದ ಸುಶೀಲ ಸುಬ್ರಹ್ಮಣ್ಯ ಅವರಿಗೆ ಮಾಧ್ಯಮ ಅಕಾಡೆಮಿಯ ವಿಶೇಷ ಪ್ರಶಸ್ತಿ

ಬೆಂಗಳೂರು: 90ರ ಹೊಸ್ತಿಲಿನಲ್ಲಿರುವ ಹಿರಿಯ ಪತ್ರಕರ್ತೆ ಸುಶೀಲ ಸುಬ್ರಹ್ಮಣ್ಯ ಇವರು ಕರ್ನಾಟಕ ಮಾಧ್ಯಮ ಅಕಾಡೆಮಿಯ 2022ನೇ ಸಾಲಿನ ವಿಶೇಷ ಪ್ರಶಸ್ತಿ ಭಾಜರಾಗಿರುವುದು ಹೆಮ್ಮಯ ಸಂಗತಿ.

ತಮ್ಮ ಸಂಪಾದಕತ್ವದಲ್ಲಿ ಸದರನ್ ಎಕನಾಮಿಸ್ಟ್ ಆಂಗ್ಲ ನಿಯತಕಾಲಿಕೆಯನ್ನು 56 ವರ್ಷಗಳ ಕಾಲ ಮಹಿಳೆಯಾಗಿ ಮುನ್ನಡೆಸಿದ ಹಿರಿಮೆ ಗರಿಮೆ ಅವರದು.

ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದ ಕೆ.ಎನ್. ಸುಬ್ರಹ್ಮಣ್ಯ ಅವರು 1962ರಲ್ಲಿ ಸದರನ್ ಎಕನಾಮಿಸ್ಟ್ ನಿಯತಕಾಲಿಕೆ ಪ್ರಾರಂಭಿಸಿದರು. 1966ರಲ್ಲಿ ಅವರ ನಿಧನಾ ನಂತರ ಪತ್ರಿಕೆಯನ್ನು ತಮ್ಮ ಸಂಪಾದಕತ್ವದಲ್ಲಿ ಮುಂದುವರೆಸಿದ ಸುಶೀಲ ಸುಬ್ರಹ್ಮಣ್ಯ ಅವರು, ಕೋವಿಡ್ ಸಂದರ್ಭದಲ್ಲಿಯೂ ಪ್ರಕಟಣೆ ಹೊರತರುವ ಮೂಲಕ ಸಾಹಸವನ್ನೇ ಮಾಡಿದರು.

ಭಾರತದ ಆರ್ಥಿಕ ವ್ಯವಸ್ಥೆಯ ಹಲವು ವಿಚಾರಸಂಕಿರಣಗಳಲ್ಲಿ ಭಾಗವಹಿಸಿದ್ದು, ಹಲವು ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸ ನೀಡಿರುವ ಹಿರಿಮೆ ಅವರದು. ಪ್ರಧಾನಿಯಾಗಿದ್ದ ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಅವರ ಜೊತೆಯಲ್ಲಿ ಸಂವಾದ ನಡೆಸಿರುವುದು ಕನ್ನಡ ನಾಡಿಗೆ ಹೆಮ್ಮೆ ತರುವಂತಹ ಸಂಗತಿ.
ಅಷ್ಟೇ ಅಲ್ಲ ಮಹಿಳಾ ಪತ್ರಕರ್ತೆಯಾಗಿ ಸುದ್ದಿಮನೆಯಲ್ಲಿ ತಮ್ಮದೇ ಛಾಪು ದಾಖಲಿಸಿದ್ದಾರೆ.

ಈ ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿ ನಿಯತಕಾಲಿಕೆಯನ್ನು ಹೊರತರುತ್ತಿರುವ ಸುಶೀಲ ಅವರು, ಹಲವು ಸಂಘಸಂಸ್ಥೆಗಳ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

ಸುದ್ದಿಮನೆಯ ಹಿರಿಯಕ್ಕೆ ಸುಶೀಲ ಅವರು ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಸುಧೀರ್ಘ ಸೇವೆಯನ್ನು ಗುರುತಿಸಿ 75ನೇ ಅಮೃತ ಸ್ವತಂತ್ರ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದ ಪತ್ರಕರ್ತರ ತಂಡ ಬೆಂಗಳೂರಿನ ಗುಟ್ಟಹಳ್ಳಿಯಲ್ಲಿರುವ ಅವರ ಕಚೇರಿಗೆ ತೆರಳಿ ಸನ್ಮಾನಿಸಿತ್ತು.

ಹಾಸನದಲ್ಲಿ ವಿದ್ಯಾಭ್ಯಾಸ:
1934ರಲ್ಲಿ ಹಾಸನದ ಕೆ.ಆರ್. ಪುರಂನಲ್ಲಿ ಜನಿಸಿದ ಸುಶೀಲ ಅವರು, ಸೇಂಟ್ ಫಿನೋಮಿನಾ ಮಿಡಲ್ ಸ್ಕೂಲ್‌ನಲ್ಲಿ, ಸರ್ಕಾರಿ ಬಾಲಕೀಯರ ಪ್ರೌಢಶಾಲೆ, ಸರ್ಕಾರಿ ಇಂಟರ್ ಮೀಡಿಯಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಹಾಸನದಲ್ಲಿ ಮುಗಿಸಿ, ಮೈಸೂರಿನಲ್ಲಿ ಉನ್ನತ ಶಿಕ್ಷಣ ಮಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕೆ.ಎನ್. ಸುಬ್ರಹ್ಮಣ್ಯ ಅವರ ಹೆಸರಿನಲ್ಲಿ ದತ್ತಿ ನಿಧಿಯನ್ನು ಇಟ್ಟಿದ್ದು, ಪ್ರತಿ ವರ್ಷ ಸಮ್ಮೇಳನದ ಸಂದರ್ಭದಲ್ಲಿ ಆಂಗ್ಲ ಪತ್ರಿಕೆಯ ಪ್ರತಿಭಾನ್ವಿತ ಪತ್ರಕರ್ತರಿಗೆ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದೆ.

ಅಭಿನಂದನೆಗಳು:
90ನೇ ವಸಂತಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಸುಶೀಲ ಸುಬ್ರಹ್ಮಣ್ಯ ಅವರ ಸೇವೆ ಗುರುತಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ವಿಶೇಷ ಪ್ರಶಸ್ತಿ ನೀಡುತ್ತಿರುವುದು ಸುದ್ದಿಮನೆಯಲ್ಲಿ ನಮ್ಮನ್ನೆ ನಾವು ಹೆಮ್ಮೆಯಿಂದ ಗೌರವಿಸಿಕೊಂಡಂತೆ ಆಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಪತ್ರಕರ್ತೆಯರ ಸಂಘ ಸೇರಿದಂತೆ ಪತ್ರಿಕೋದ್ಯಮದ ಹಿರಿಯ ಕಿರಿಯರು ಅಭಿಮಾನ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments