Tuesday, June 6, 2023
Homeದೇಶಉದಯೋನ್ಮುಖ ನೃತ್ಯಕಲಾವಿದೆ ನೇಹಾ ಪ್ರಸಾದ್ ರಂಗಪ್ರವೇಶ

ಉದಯೋನ್ಮುಖ ನೃತ್ಯಕಲಾವಿದೆ ನೇಹಾ ಪ್ರಸಾದ್ ರಂಗಪ್ರವೇಶ

ಉದಯೋನ್ಮುಖ ನೃತ್ಯ ಕಲಾವಿದೆ ಕು. ನೇಹಾ ಪ್ರಸಾದ್ ಬೆಂಗಳೂರಿನ ಖ್ಯಾತ ‘’ಶಾಂತಲಾ ಆರ್ಟ್ಸ್ ಅಕಾಡೆಮಿ’’ಯ ನಿರ್ದೇಶಕ, ಹಿರಿಯ ನಾಟ್ಯಗುರು ಮತ್ತು ಪ್ರಸಿದ್ಧ ನಟವನ್ನಾರ್ ಆಗಿರುವ ಕಲಾಯೋಗಿ ವಿದ್ವಾನ್ ಗುರು ಪುಲಿಕೇಶಿ ಕಸ್ತೂರಿ ಅವರ ಅಚ್ಚುಮೆಚ್ಚಿನ ಶಿಷ್ಯೆ. ಅವರ ನುರಿತ ಗರಡಿಯಲ್ಲಿ ಕಳೆದ 16 ವರ್ಷಗಳಿಂದ ಏಕ ಗುರುನಿಷ್ಠೆಯಿಂದ ಸತತ ಪರಿಶ್ರಮದಿಂದ ನೃತ್ಯಾಭ್ಯಾಸ ಮಾಡುತ್ತಿರುವ ಬದ್ಧತೆಯುಳ್ಳ ನೃತ್ಯಾಕಾಂಕ್ಷಿ. ವಿದ್ಯಾಭ್ಯಾಸದಲ್ಲೂ ಸಮಾನ ಪ್ರಗತಿ ತೋರಿಸಿರುವ ನೇಹಾ, ಇದೀಗ ಭರತನಾಟ್ಯದಲ್ಲಿ ತನ್ನ ಕಲಾನೈಪುಣ್ಯವನ್ನು ಪ್ರದರ್ಶಿಸಲು ಸಜ್ಜಾಗಿದ್ದಾಳೆ. ನೇಹಾ, ಇದೇ ತಿಂಗಳ ಫೆಬ್ರವರಿ 11 ರಂದು ಶನಿವಾರ ಸಂಜೆ 5 ಗಂಟೆಗೆ, ಜೆ.ಸಿ.ರಸ್ತೆಯಲ್ಲಿರುವ ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಲಿದ್ದಾಳೆ. ಅವಳ ನೃತ್ಯದೈಸಿರಿಯನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆತ್ಮೀಯ ಸುಸ್ವಾಗತ.


ಶ್ರೀಮತಿ ವಂದನಾ ಮತ್ತು ಶ್ರೀ ಎಸ್. ನರಸಿಂಹ ಪ್ರಸಾದ್ ಅವರ ಪುತ್ರಿ ನೇಹಾ ಚಟುವಟಿಕೆಯ ಚಿಲುಮೆ. ತನ್ನ 6 ನೆಯ ವಯಸ್ಸಿನಿಂದ ಇಂದಿನವರೆಗೂ ಶ್ರೀ ಪುಲಿಕೇಶಿ ಕಸ್ತೂರಿ ಅವರಲ್ಲಿ ಕಳೆದ 16 ವರ್ಷಗಳಿಂದ ಭರತನಾಟ್ಯವನ್ನು ಬಹು ನಿಷ್ಠೆಯಿಂದ, ಅತ್ಯಾಸಕ್ತಿಯಿಂದ ಕಲಿಯುತ್ತಿದ್ದಾಳೆ. ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ನೃತ್ಯ ಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕಗಳನ್ನು ಪಡೆದು ಜಯಶಾಲಿಯಾಗಿದ್ದಾಳೆ. ಶಾಲಾ- ಕಾಲೇಜಿನಲ್ಲಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದ ಹೆಗ್ಗಳಿಕೆ ಇವಳದು. ಓದಿನಲ್ಲೂ ಮುಂದು. ಪಿಯೂಸಿ ಮತ್ತು ಬಿಕಾಂ ಪದವಿಯಲ್ಲಿ ಶೇ 92 ಅಂಕಗಳನ್ನು ಪಡೆದ ಹೆಮ್ಮೆ ನೇಹಳದು. ಇದೀಗ ತಾನು ಓದಿದ ಶೇಷಾದ್ರಿಪುರಂ ಕಾಲೇಜಿನಲ್ಲೇ ಫೈನಾನ್ಸ್ ಮತ್ತು ಅಕೌಂಟಿಂಗ್ ವಿಷಯದಲ್ಲಿ ಅಂತಿಮ ಹಂತದ ಸ್ನಾತಕೋತ್ತರ ಪದವಿಗೆ ಅಭ್ಯಾಸ ಮಾಡುತ್ತಿರುವ ಈ ಬುದ್ಧಿವಂತ ಹುಡುಗಿಗೆ ನೃತ್ಯದಂತೆ ವಿದ್ಯಾಭ್ಯಾಸದಲ್ಲೂ ಪ್ರಗತಿ ಸಾಧಿಸುವ ಕನಸು.
ಈಗಾಗಲೇ ಅನೇಕ ಕಡೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ನೃತ್ಯ ಪ್ರದರ್ಶನಗಳನ್ನು ನೀಡಿರುವ ನೇಹಾ, ಶಾಂತಲಾ ಆರ್ಟ್ಸ್ ಅಕಾಡೆಮಿಯ ಪರಿವರ್ತನ, ದಶಾವತಾರ, ಅಷ್ಟಲಕ್ಷ್ಮಿ, ಶಾಲಿವಾಹನ ಮುಂತಾದ ನೃತ್ಯ ಕಾರ್ಯಕ್ರಮ-ನೃತ್ಯರೂಪಕಗಳಲ್ಲಿ ಭಾಗವಹಿಸಿದ್ದಾಳೆ. 2021 ರಲ್ಲಿ ಇದಾಗಲೇ ‘ಗೆಜ್ಜೆಪೂಜೆ’ಯನ್ನು ಪೂರ್ಣಗೊಳಿಸಿರುವ ನೇಹಾಗೆ ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯಿಂದ 2022 ರಲ್ಲಿ ರಾಜ್ಯ ಸ್ಕಾಲರ್ಷಿಪ್ ದೊರೆತಿರುವ ಸಂಗತಿ ನಿಜಕ್ಕೂ ವಿಶೇಷ. ಗುರುಗಳ ಮಾರ್ಗದರ್ಶನದಲ್ಲಿ ನಾಡಿನಾದ್ಯಂತ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆ ಗಳಿಸಿರುವ ಇವಳು, ವಿಶ್ವ ನೃತ್ಯದಿನಾಚರಣೆ, ನೃತ್ಯೋಲ್ಲಾಸ, ದಸರಾ ನೃತ್ಯೋತ್ಸವ, ಶಿವರಾತ್ರಿ-ತಂಜಾವೂರು ಫೆಸ್ಟಿವಲ್, ಚೆನ್ನೈ ಕನ್ನಡ ಸಂಘ, ಯಡಿಯೂರು ಲಕ್ಷ ದೀಪೋತ್ಸವ ಮುಂತಾದ ಅನೇಕ ಪ್ರಮುಖ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡಿದ್ದಾಳೆ. ಹೊಯ್ಸಳ ಕರ್ನಾಟಕ ಸಂಘ, ಎಂ.ಈ.ಎಸ್. ಕಾಲೇಜ್, ನ್ಯಾಷನಲ್ ಕೋ ಆಪರೇಟಿವ್ ಸೊಸೈಟಿ ಮುಂತಾದ ಅನೇಕ ಸಂಘ-ಸಂಸ್ಥೆಗಳಿಂದ ಬಹುಮಾನಗಳನ್ನು ಪಡೆದಿರುವ ಇವಳಿಗೆ ನೃತ್ಯದ ಬಗ್ಗೆ ಅದಮ್ಯ ಒಲವು. ಈ ದಿಸೆಯಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸುವ ಬಯಕೆ.

–  ವೈ.ಕೆ.ಸಂಧ್ಯಾ ಶರ್ಮ

RELATED ARTICLES
- Advertisment -
Google search engine

Most Popular

Recent Comments