- ಗುತ್ತಿಗೆದಾರರ ಬಿಲ್ ಪಾವತಿ ವಿಚಾರದಲ್ಲಿ ಸಮಸ್ಯೆ ಸೃಷ್ಟಿಸಿಕೊಂಡ ಬಿಬಿಎಂಪಿ
- ಬಿಲ್ ಪಾವತಿ ಮಾಡದ ಬಿಬಿಎಂಪಿ ವಿರುದ್ಧ ಗುತ್ತಿಗೆದಾರರ ಸಂಘದ ಆಕ್ರೋಶ
ಬಿಬಿಎಂಪಿ ಕಳೆದ ಎರಡು ವರ್ಷಗಳ ಕಾಮಗಾರಿಗಳ ಬಿಲ್ ಪಾವತಿ ಸಲುವಾಗಿ ಬ್ಯಾಂಕ್ ಸಾಲ ಪಡೆದು ಹಣ ನೀಡಲು ಹೊರಟಿರುವುದಕ್ಕೆ ಗುತ್ತಿಗೆದಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಡೆ ವಿರುದ್ಧ ಬಿಬಿಎಂಪಿ ಗುತ್ತಿಗೆದಾರರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, “ಇದು ಮೂಗಿನ ಬದಲಿಗೆ ತಲೆಗೆ ತುಪ್ಪ ಸವರಿ ನೆಕ್ಕಿಕೊಳ್ಳಿ ಎಂದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದೆ.
ಬಿಲ್ ಪಾವತಿ ಅಸಲಿ ವಿಚಾರವೇನು?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2020-21 ಮತ್ತು 21-22 ನೇ ಸಾಲಿನಲ್ಲಿ ಮಾಡಿ ಮುಗಿಸಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಕಂಟ್ರಾಕ್ಟರ್‌ಗಳ ಬಿಲ್ ಪಾವತಿಸಲು ರಾಜ್ಯ ಸರ್ಕಾರದ ಅನುಮತಿ ಪಡೆದು ₹ 400 ಕೋಟಿವರೆಗೆ ಬ್ಯಾಂಕ್ ಸಾಲ ಪಡೆಯಲು ಮುಂದಾಗಿದೆ.
ಈ ಸಾಲವನ್ನು ಬ್ಯಾಂಕಿಗೆ ಬಿಬಿಎಂಪಿಯೇ ಕಟ್ಟಲಿದೆ. ಪಾಲಿಕೆಯ ಬಾಕಿ ಚುಕ್ತಾ ಲೆಕ್ಕಾಚಾರದ ಆಟದಲ್ಲಿ ಸಾಲ ಮರುಪಾವತಿ ಅವಧಿಯವರೆಗಿನ ಬಡ್ಡಿಯನ್ನು ಗುತ್ತಿಗೆದಾರರೇ ಕಟ್ಟಬೇಕಿದೆ. ಒಟ್ಟಾರೆ ಎರಡು ವರ್ಷಗಳಲ್ಲಾಗಿರುವ 5,586 ಬಿಲ್‌ಗಳಿಗೆ ₹2,782.22 ಕೋಟಿ ರೂಪಾಯಿಗಳನ್ನು ಪಾಲಿಕೆ ಪಾವತಿಸಬೇಕಿದೆ.
ಗುತ್ತಿಗೆದಾರರ ಬಿಲ್ ಸಂಕಷ್ಟಕ್ಕೆ ತಾತ್ಕಾಲಿಕವಾಗಿ ಪರಿಹಾರ ಕೊಡಿಸಲು ಮುಂದಾದ ಬಿಬಿಎಂಪಿ ಸರ್ಕಾರಕ್ಕೆ ಪತ್ರ ಬರೆದಿತ್ತು. ‘ಆಪ್ಷನಲ್ ವೆಂಡರ್ ಬಿಲ್ ಡಿಸ್ಕೌಂಟಿಂಗ್ ವ್ಯವಸ್ಥೆʼ (ಒವಿಡಿಎಸ್) ಅಳವಡಿಸಿಕೊಂಡು, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಲು ಅನುವಾಗುವಂತೆ ಅನುಮೋದನೆ ನೀಡಲು ಕೋರಿಕೊಂಡಿತ್ತು. ಈ ಹಿನ್ನೆಲೆಯಲ್ಲಿ 2022ರ ಅ. 19ರಂದು ಬಿಬಿಎಂಪಿ ಮುಖ್ಯ ಆಯುಕ್ತರು ಪತ್ರ ಬರೆದಿದ್ದರು. ಈ ಪತ್ರಕ್ಕೆ 2023ರ ಜನವರಿ 18ರಂದು ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.


ಮನವಿಯಲ್ಲಿ ಏನಿತ್ತು?
ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿಲ್ ಪಾವತಿ ಮಾಡದಿರುವುದರಿಂದ ಬಿಬಿಎಂಪಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಬಾಕಿ ಪಾವತಿಗೆ ಕಂಟ್ರಾಕ್ಟರ್‌ಗಳು ಪದೇ ಪದೇ ಮನವಿ ಮಾಡುತ್ತಿದ್ದಾರೆ. ಬೇ ಬಾಕಿ ವಿಳಂಬ ಸಂಸ್ಥೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಮತ್ತು ಅವುಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಹೀಗಾಗಿ, ಸಾಲದ ರೂಪದಲ್ಲಿ ₹1,000 ಕೋಟಿ ವಿಶೇಷ ಅನುದಾನವನ್ನು ಸರ್ಕಾರ ಬಿಬಿಎಂಪಿಗೆ ಬಿಡುಗಡೆ ಮಾಡುವಂತೆ ಕೋರಲಾಗಿದೆ. ಇದಕ್ಕೆ ಒವಿಡಿಎಸ್ ಪದ್ಧತಿ ಅಳವಡಿಸಲು ಚಿಂತಿಸಲಾಗಿದ್ದು, ಸರ್ಕಾರ ಇದಕ್ಕೆ ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಕೋರಿಕೊಳ್ಳಲಾಗಿತ್ತು.
ಏನಿದು ಒವಿಡಿಎಸ್?
ಬ್ಯಾಂಕುಗಳೇ ಪಾಲಿಕೆಯನ್ನು ಸಂಪರ್ಕಿಸಿ ಸೂಕ್ತ ಬಡ್ಡಿ ದರದಲ್ಲಿ ಸಾಲ ರೂಪದಲ್ಲಿ ಹಣಕಾಸು ಒದಗಿಸುವ ವ್ಯವಸ್ಥೆ ಒವಿಡಿಎಸ್. ಆಪ್ಷನಲ್ ವೆಂಡರ್ ಬಿಲ್ ಡಿಸ್ಕೌಂಟಿಂಗ್ ವ್ಯವಸ್ಥೆಯಲ್ಲಿ ಎಲ್ಲ ರಾಷ್ಟ್ರೀಯ ಮತ್ತು ಇತರ ಷೆಡ್ಯೂಲ್ಡ್ ಬ್ಯಾಂಕುಗಳು ಭಾಗವಹಿಸಲು ಅವಕಾಶವಿದೆ.
ಈ ವ್ಯವಸ್ಥೆಯಲ್ಲಿ ಪಾಲಿಕೆ ಒಡಂಬಡಿಕೆ ಮಾಡಿಕೊಂಡಿರುವ ಮತ್ತು ಗುತ್ತಿಗೆದಾರರಿಗೆ ಅನುಕೂಲಕರವಾದ ಬಡ್ಡಿ ದರ ಮತ್ತು ಅವಧಿಯನ್ನು ಬ್ಯಾಂಕ್ ನಿಗದಿಪಡಿಸುತ್ತದೆ. ಇಲ್ಲಿ ಅಗತ್ಯವಿರುವವರು ಸ್ವಇಚ್ಛೆಯಿಂದ ಬಿಲ್ ಡಿಸ್ಕೌಂಟ್ ಮಾಡಿಕೊಂಡು ಹಣ ಪಡೆಯಬಹುದು. ಬ್ಯಾಂಕುಗಳು ನಿಗದಿಪಡಿಸಿದ ಅವಧಿಯ ಆಧಾರದಲ್ಲಿ ನಿರ್ದಿಷ್ಟ ಅವಧಿಯ ಒಳಗೆ ಪಾಲಿಕೆ ಪಾವತಿಸಬಹುದಾದ ಬಿಲ್ ಹೊಂದುವವರು ಮಾತ್ರ ಈ ಪದ್ಧತಿಯಲ್ಲಿ ಭಾಗವಹಿಸಲು ಅವಕಾಶ ನೀಡಬಹದಾಗಿದೆ. ‘ಈ ವ್ಯವಸ್ಥೆಯಲ್ಲಿ ಬಡ್ಡಿ ದರವನ್ನು ಗುತ್ತಿಗೆದಾರರು ಭರಿಸಬೇಕು. ಜ್ಯೇಷ್ಠತೆ ಆಧಾರದಲ್ಲಿ ಗುತ್ತಿಗೆಯ ಪೂರ್ಣ ಮೊತ್ತವನ್ನು ಸಂಬಂಧಿಸಿದ ಬ್ಯಾಂಕ್‌ಗೆ ಪಾಲಿಕೆ ಪಾವತಿಸಲಿದೆ.
ಗುತ್ತಿಗೆದಾರರ ಆಕ್ರೋಶ
ತಮ್ಮ ಕಾಮಗಾರಿ ಬೇಬಾಕಿ ನೀಡಲು ಬಿಬಿಎಂಪಿ ಮಾಡಿಕೊಂಡಿರುವ ನಿರ್ಧಾರದ ಬಗ್ಗೆ ಬಿಬಿಎಂಪಿ ಗುತ್ತಿಗೆದಾರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಪಾಲಿಕೆಯ ಈ ನಿರ್ಧಾರದಿಂದ ಬೆರಳೆಣಿಕೆ ಮಂದಿಗೆ ಲಾಭವಾಗುತ್ತದೆಯೇ ಹೊರತು ಬಹುಸಂಖ್ಯಾತರಿಗಲ್ಲ ಎಂದಿದೆ.
ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್, ಬಿಲ್ ಪಡೆದುಕೊಳ್ಳಲು ಹಲವಷ್ಟು ನೀತಿ ನಿಯಮಗಳನ್ನು ರೂಪಿಸಿದ್ದಾರೆ. ಅವುಗಳನ್ನು ಪೂರ್ಣ ಮಾಡುವುದರೊಳಗೇ ಒಂದಷ್ಟು ದಿನ ಕಳೆದು ಹೋಗುತ್ತದೆ. ಜೊತೆಗೆ ಬಡ್ಡಿ ಕಟ್ಟುಲು ನಮಗೆ ಸೂಚಿಸಿದ್ದಾರೆ. ಆದರೆ ಅದು ಎಷ್ಟು ಸಮಯದವರೆಗೆ ಎಂದು ಹೇಳಿಲ್ಲ. ಹಾಗೆಯೇ ಕನಿಷ್ಠ ಕಾಮಗಾರಿ ಮೊತ್ತದ ಬಗೆಗೂ ಸಮರ್ಪಕ ಮಾಹಿತಿ ನೀಡಿಲ್ಲ, ಹೀಗೆ ಹಲವು ವಿಚಾರಗಳಲ್ಲಿ ಸ್ಪಷ್ಟತೆಯನ್ನೇ ನೀಡದೆ. ಬಡ್ಡಿ ಕಟ್ಟಿ ಹಣ ಪಡೆದುಕೊಳ್ಳಿ ಎಂದರೆ ಹೇಗೆ? ಇದೊಂದು ರೀತಿ, ಮೂಗಿನ ಬದಲಿಗೆ ತಲೆಗೆ ತುಪ್ಪ ಸವರಿ ನೆಕ್ಕಿಕೊಳ್ಳಿ ಎಂದಂತಾಗಿದೆ ಎಂದು ಕಿಡಿ ಕಾರಿದ್ದಾರೆ.
ಹೀಗೆ ಒಂದು ಸಮಸ್ಯೆಯಿಂದ ಬಚಾವ್ ಆಗಲು ಹೊರಟ ಬಿಬಿಎಂಪಿ ಮತ್ತೊಂದು ಸಮಸ್ಯೆಯನ್ನು ಮೈಮೇಲೆಳೆದುಕೊಂಡಿದೆ. ಇದಕ್ಕೆ ಸೂಕ್ತ ಪರಿಹಾಕ ಕಂಡುಕೊಳ್ಳದಿದ್ದಲ್ಲಿ ಮತ್ತೆ ಗುತ್ತಿಗೆದಾರರೇ ಪಾಲಿಕೆ ವಿರುದ್ಧ ಸಮರ ಸಾರಿದರೂ ಅಚ್ಚರಿ ಇಲ್ಲ.