Saturday, June 3, 2023
Homeನೃತ್ಯಮನಸೂರೆಗೊಂಡ ‘ನಾದಾಭಿನಯಂ’ -ಸಂಗೀತ-ನೃತ್ಯೋತ್ಸವ

ಮನಸೂರೆಗೊಂಡ ‘ನಾದಾಭಿನಯಂ’ -ಸಂಗೀತ-ನೃತ್ಯೋತ್ಸವ

ಭಾರತೀಯ ಅನೂಚಾನ ಪರಂಪರೆಯ ಕಲಾಭಿವೃದ್ಧಿಯ ನಿಜ ಕಾಳಜಿಯಿಂದ ಕಳೆದ ೧ಹನ್ನೆರಡು ವರ್ಷಗಳಿಂದ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ‘ಫ್ಲೂಟ್ ಅಂಡ್ ಫೀಟ್’ ಅಕಾಡೆಮಿಯು ಕಲಾರಂಗದಲ್ಲಿ ತನ್ನದೇ ಆದ ಅಸ್ಮಿತೆಯಿಂದ ಸೇವೆ ಸಲ್ಲಿಸುತ್ತಾ ಬಂದಿದೆ. ಇತ್ತೀಚಿಗೆ ಬಸವನಗುಡಿಯ ‘ಕಲಾಕ್ಷಿತಿ’ಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ನಾದಾಭಿನಯಂ’ ವೈವಿಧ್ಯಪೂರ್ಣ – ಅಪೂರ್ವ ನಾದ-ನೃತ್ಯ ಕಾರ್ಯಕ್ರಮದ ರೂವಾರಿಗಳು ಪ್ರಖ್ಯಾತ ಕೊಳಲುವಾದಕ ವಿವೇಕ್ ಕೃಷ್ಣ ಮತ್ತು ಪ್ರಸಿದ್ಧ ಭರತನಾಟ್ಯ ಕಲಾವಿದೆ ಅರಣ್ಯ ನಾರಾಯಣ್.

ಕಲಾಕ್ಷಿತಿಯ ಆವರಣವೇ ಒಂದು ಬಗೆಯ ಧನಾತ್ಮಕ ಸಂವೇದನೆಯ ದೈವೀಕ ಕಲಾಕ್ಷೇತ್ರ. ಹಿತವಾದ ವಾತಾವರಣದಲ್ಲಿ ನಿರ್ಮಿತವಾದ ಆಪ್ತ ನೃತ್ಯಮಂದಿರದ ವೇದಿಕೆಯ ಮೇಲೆ ಎರಡು ದಿನಗಳ ಅನನ್ಯ ಪ್ರಸ್ತುತಿಗಳು ಸಾದರಗೊಂಡವು. ಉದಯೋನ್ಮುಖರಿಗೆ ವೇದಿಕೆಯನ್ನು ಒದಗಿಸುವ ಪ್ರೋತ್ಸಾಹಕ ದೃಷ್ಟಿಯೊಂದಿಗೆ ಪರಿಣತ ಕಲಾವಿದರ ಪ್ರದರ್ಶನಗಳನ್ನು ಕಲಾರಸಿಕರಿಗೆ ಒದಗಿಸುವ ಸದುದ್ದೇಶದಿಂದ ನಡೆಸಲಾಯಿತು.

ಪ್ರಥಮ ದಿನ- ಭರವಸೆಯ ನೃತ್ಯಕಲಾವಿದೆ ಕು. ಸಂಸ್ಕೃತಿ ಕೇಶವನ್ ( ಗುರು ವಿ. ಗುರುರಾಜ ವಸಿಷ್ಠ) ಅಲ್ಲರಿಪು, ಶೃಂಗಪುರಾಧೀಶ್ವರಿ ಮತ್ತು ಶಿವಸ್ತುತಿಯನ್ನು ತನ್ನ ಅಂಗಶುದ್ಧ ನರ್ತನದಿಂದ ಸಾದರಪಡಿಸಿ ಮೆಚ್ಚುಗೆ ಪಡೆದಳು. ಅನಂತರ- ಚೆನ್ನೈನ ಹಿರಿಯ ನೃತ್ಯಕಲಾವಿದೆ ವಿ. ಅರ್ಚನಾ ನಾರಾಯಣ ಮೂರ್ತಿ- ನೇರ ಸಂಗೀತದ ಸಹಕಾರದೊಂದಿಗೆ ಅತ್ಯಂತ ಪರಿಣತಿಯಿಂದ ಪುಷ್ಪಾಂಜಲಿ ಮತ್ತು ಭಕ್ತಿ-ಶೃಂಗಾರ ಸಮ್ಮಿಳಿತ ‘ವರ್ಣ’ವನ್ನು ಪ್ರೌಢವಾಗಿ ಅಷ್ಟೇ ಸೊಗಸಾಗಿ ನಿರೂಪಿಸಿದರು. ಮುಂದೆ- ತಮಿಳು ‘ಪದಂ’ನಲ್ಲಿ ಖಂಡಿತ ನಾಯಕಿಯ ಮಾನಸಿಕ ವಿಪ್ಲವಕ್ಕೆ ಸಮರ್ಥವಾಗಿ ಕನ್ನಡಿ ಹಿಡಿದರೆ, ಜಗದೋದ್ಧಾರನ ಆಡಿಸಿದಳೆಶೋದೆ ಕೃತಿಯನ್ನು ತಮ್ಮ ಅಭಿನಯ ಪ್ರಾವೀಣ್ಯದಿಂದ ಪರಿಣಾಮಕಾರಿಯಾಗಿ ಪ್ರಸ್ತುತಿಗೊಳಿಸಿ ಹೃದಯಸ್ಪರ್ಶಿ ಅನುಭವ ನೀಡಿದರು.

ಎರಡನೆಯ ದಿನ- ಮೊದಲಿಗೆ ಉದಯೋನ್ಮುಖ ನೃತ್ಯಕಲಾವಿದೆ ವಿದ್ಯಾ ಬಾಲಚಂದ್ರ (ಗುರು-ವಿ. ಸೌಂದರ್ಯ ಶ್ರೀವತ್ಸ) ಸಪ್ತಾಶ್ವವನ್ನೇರಿ ಹೊರಟ ಜಗದ ನಿಯಾಮಕ ‘ಸೂರ್ಯ’ನ ವೈಖರಿ -ವೈಶಿಷ್ಟ್ಯಗಳನ್ನು ತನ್ನ ಆಕರ್ಷಕ ಆಂಗಿಕಾಭಿನಯಗಳಿಂದ ಕಟ್ಟಿಕೊಟ್ಟರು. ಮುಂದೆ- ಮಹಾದೇವನ ಕುರಿತ ಭಕ್ತಿಪ್ರಧಾನ ಕೃತಿಯಲ್ಲಿ ಸುಂದರೇಶ್ವರನ ವಿಶಿಷ್ಟಾಭರಣ- ಸಮ್ಮೋಹಕ ರೂಪ- ಮಹಿಮೆಗಳನ್ನು ಸಂಕ್ಷಿಪ್ತ ಸಂಚಾರಿಗಳಲ್ಲಿ, ಸುಮನೋಹರ ಭಂಗಿಗಳಲ್ಲಿ ಸಾಕ್ಷತ್ಕರಿಸಿದರು. ‘ಶ್ರೀ ಕೃಷ್ಣ ಕಮಲಾನಾಥೋ’-ವರ್ಣದ ಕೃಷ್ಣ ಮತ್ತು ಅರ್ಜುನರ ಸಂವಾದ ಭಾಗವನ್ನು ಅಚ್ಚುಕಟ್ಟಾಗಿ ಅಷ್ಟೇ ನಯನ ಮನೋಹರವಾಗಿ ಸಾದರಗೊಳಿಸಿದರು.

ಮುಂದೆ ಮುರಳೀಗಾನ ವಿಶಾರದರಾದ ಪ್ರಖ್ಯಾತ ‘ಕೊಳಲು ಸಹೋದರ’ರೆಂದೇ ಖ್ಯಾತರಾದ ಹೇರಂಭ-ಹೇಮಂತ ಅವಳೀ ಸಹೋದರರ ಕರ್ಣಾನಂದಕರ ಕರ್ನಾಟಕ ಶಾಸ್ತ್ರೀಯ ಕೊಳಲ ಜುಗಲ್ಬಂದಿ ವಾದನ ಆಲಿಸುವ ನಲಿವಿನ ಸಂದರ್ಭ. ರೂಪದಲ್ಲೂ ಸಾಮ್ಯತೆಯುಳ್ಳ ಯಮಳ ಕಲಾವಿದರು ವಾದನದ ಧ್ವನಿಯಲ್ಲೂ ಏಕತೆ ಹೊರಹೊಮ್ಮಿಸಿದ್ದು ನಿಜಕ್ಕೂ ಅತಿಶಯವಾಗಿತ್ತು. ಕಲ್ಯಾಣಿ ರಾಗದ ‘ವರ್ಣ’ ವನಜಾಕ್ಷಿ , ತ್ಯಾಗರಾಜರ ಕೀರ್ತನೆ ‘ಸೀತಾಪತೇ’ ಹಾಗೂ ಇನ್ನಿತರ ಕೃತಿಗಳನ್ನು ಹಾಗೂ ‘ನಾರಾಯಣತೆ ನಮೋ ನಮೋ’ ಭಜನೆಯನ್ನು ಶ್ರುತಿ ಶುದ್ಧವಾಗಿ ನುಡಿಸಿ ನೆರೆದ ಕಲಾರಸಿಕರ ಹೃದಯವನ್ನು ತುಂಬಿದರು. ಕೊಳಲೆರಡಾದರೂ ನಾದಸುರಳಿ ಒಂದಾಗಿ ಬೆಸೆದು, ಸಮ್ಮಿಳಿತವಾಗಿ ಏಕದ್ವನಿಯಲ್ಲಿ ಹೊರಹೊಮ್ಮಿಸಿದ ಗಾನಸುಧೆ ಈ ಸೋದರರ ವೈಶಿಷ್ಟ್ಯ. ಪುಟ್ಟಮಕ್ಕಳಿಂದ ಹಿಡಿದು ಹಿರಿಯರವರೆಗೆ ಈ ಪ್ರತಿಭಾವಂತ ವಾದಕರ ಹೊಸ ಮಜಲಿನ ಅಲೆಯಲೆಯ ಏರಿಳಿತದ ನಾದಸಲಿಲವನ್ನು ಮಂತ್ರಮುಗ್ಧರಾಗಿ ಆಸ್ವಾದಿಸಿದರು.

****** ವೈ.ಕೆ.ಸಂಧ್ಯಾ ಶರ್ಮ

RELATED ARTICLES
- Advertisment -
Google search engine

Most Popular

Recent Comments