Saturday, June 3, 2023
Homeರಾಜ್ಯಒಪಿಎಸ್ ಜಾರಿಗೆ ಬೇರೆ ರಾಜ್ಯಗಳಂತೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪ. ಎಲ್ಲ ನಾಯಕರ ಜತೆ...

ಒಪಿಎಸ್ ಜಾರಿಗೆ ಬೇರೆ ರಾಜ್ಯಗಳಂತೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪ. ಎಲ್ಲ ನಾಯಕರ ಜತೆ ಚರ್ಚೆ ನಡೆಸಿ ತೀರ್ಮಾನ; ಡಿ.ಕೆ.ಶಿವಕುಮಾರ್.

ಇಂದಿಗೆ ಎಂಟನೇ ದಿನಕ್ಕೆ ಕಾಲಿರಿಸಿದ ಎನ್ ಪಿ ಎಸ್ ನೌಕರರ ಧರಣಿ.

ಎನ್ ಪಿ ಎಸ್ ವಿಚಾರದಲ್ಲಿ ಅನೇಕ ಸ್ನೇಹಿತರು 2004 ರಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಹೋರಾಟ ನಿಮ್ಮ ಮೂಲ ಹಕ್ಕು. ಸರ್ಕಾರ ವ್ಯಾಪಾರಿಯ ದೃಷ್ಟಿಕೋನದಿಂದ ಪಿಂಚಣಿ ಯೋಜನೆಯನ್ನು ನೋಡುತ್ತಿದೆ. ಈ ಹಿಂದೆ ಸರ್ಕಾರ ಅನೇಕ ದೊಡ್ಡ ಕಂಪನಿಗಳನ್ನು ಆರಂಭಿಸಿತ್ತು. ಉದ್ಯೋಗ ಸೃಷ್ಟಿ, ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಟ್ಟು, ಎಲ್ಲಾ ವಲಯಗಳಲ್ಲಿ ಸೋಪು, ಬಲ್ಬ್, ಕಾಗದ, ವಿಮೆ ಸೇರಿದಂತೆ ಕೈಗಾರಿಕೆ ಆರಂಭಿಸಿತು. ಈ ಸಮಯದಲ್ಲಿ ಖಾಸಗಿಯವರಿಗೆ ಅವಕಾಶ ಮಾಡಿಕೊಡಲಾಯಿತು ಎಂದು ಹೇಳಿದರು.

ಸ್ವಾತಂತ್ರ್ಯ ಉದ್ಯಾನವನದಲ್ಲಿ ಎನ್ ಪಿ ಎಸ್ ನೌಕರರು ಕೈಗೊಂಡಿರುವ ಅನಿರ್ದಿಷ್ಟವಾಧಿ ಧರಣಿ ಸ್ಥಳಕ್ಕೆ ಬೇಟಿ ನೀಡಿದ ಅವರು, ಸರ್ಕಾರಿ ವಿಮಾ ಕಂಪನಿ ಸದಾ ಒಂದು ಗುಣಮಟ್ಟವನ್ನು ಕಾಯ್ದುಕೊಂಡು ಬಂದಿತ್ತು. ದೇಶದಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿ ಮಾಡಿ, ಒಂದು ಬದ್ಧತೆಯನ್ನು ಕಾಪಾಡಿಕೊಂಡು ಬಂದಿತ್ತು. ಇಂದು ಸರ್ಕಾರ ವ್ಯಾಪಾರಿಕ ದೃಷ್ಟಿಕೋನದಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದೆ . ಈ ಹಿಂದೆ ಸರ್ಕಾರ ಮಾಡಿದ ತೀರ್ಮಾನ ಬದಲಾಗಬಾರದು ಎಂದೇನೂ ಇಲ್ಲ. ಸರ್ಕಾರಕ್ಕೆ ಹಣ ಬೇಕು. ಸಂಪನ್ಮೂಲ ಕ್ರೋಡೀಕರಿಸಬೇಕು. ಹೆಚ್ಚಿನ ಆದಾಯ ಪಡೆಯುವವರಿಂದ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಣ ಮಾಡಿ ಸಮಾನತೆ ಕಾಯ್ದುಕೊಳ್ಳುವ ವ್ಯವಸ್ಥೆ ಸೃಷ್ಟಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ನಾವು ರಾಜಕಾರಣಿಗಳು ಬದುಕಿ, ಬದುಕಲು ಬಿಡುವ ನೀತಿ ಹೊಂದಬೇಕು. ಕಾಂಗ್ರೆಸ್ ಪಕ್ಷ ಇರುವುದನ್ನು ಹಂಚಿಕೊಂಡು ಪರಸ್ಪರ ಕಾಳಜಿ ವಹಿಸುತ್ತದೆ. ನಿಮಗೂ ಒಳ್ಳೆಯದಾಗಬೇಕು, ನಮಗೂ ಒಳ್ಳೆಯದಾಗಬೇಕು ಎಂದು ತಿಳಿಸಿದರು

ವ್ಯವಸ್ಥೆಯಲ್ಲಿ ನಿಮ್ಮ ನೋವು ಕೇಳುವ ಕಿವಿ, ನಿಮ್ಮ ಕಷ್ಟವನ್ನು ನೋಡುವ ಕಣ್ಣು, ಭಾವನೆ ಅರಿಯುವ ಹೃದಯ ಇಲ್ಲವಾದರೆ ಯಾರೂ ಬದುಕಲು ಸಾಧ್ಯವಿಲ್ಲ.
ನಿಮ್ಮ ಸಮಸ್ಯೆ ಬಗ್ಗೆ ನಾನು ಅಧ್ಯಯನ ಮಾಡಿದ್ದು, ಇತ್ತೀಚೆಗೆ ಖರ್ಗೆ ಅವರು ನನ್ನನ್ನು, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಇತರ ಹಿರಿಯ ನಾಯಕರನ್ನು ಕರೆಸಿ ಚರ್ಚೆ ಮಾಡಿದ್ದರು. ಆಗ ನಿಮ್ಮ ವಿಚಾರ, ನಿಮ್ಮ ಹೋರಾಟ, ರಾಜಸ್ಥಾನ ಹಾಗೂ ಹಿಮಾಚಲ ಪ್ರದೇಶದಲ್ಲಿನ ತೀರ್ಮಾನದ ಬಗ್ಗೆ ಚರ್ಚೆ ಮಾಡಲಾಯಿತು. ಸಿದ್ದರಾಮಯ್ಯ ಅವರು ಸದನದಲ್ಲಿ ಈ ಹಿಂದೆ ಮಾಡಿದ್ದ ಹೇಳಿಕೆಯೂ ಚರ್ಚೆ ಆಗಿತ್ತು. ಖರ್ಗೆ ಅವರು ಸಿದ್ದರಾಮಯ್ಯ ಅವರಿಗೆ ಈ ವಿಚಾರವಾಗಿ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು ಎಂದರು.

ಪರಮೇಶ್ವರ್ ಅವರು ಪಕ್ಷದ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದು, ಅವರು ಎಲ್ಲಾ ವರ್ಗದ ಜನರ ಜತೆ ಚರ್ಚೆ ಮಾಡಿ ಪ್ರಣಾಳಿಕೆ ತಯಾರು ಮಾಡುತ್ತಿದ್ದಾರೆ. ನಾನು ಇಲ್ಲಿ ಯಾವುದೇ ಘೋಷಣೆ ಮಾಡುವುದಿಲ್ಲ. ನಮ್ಮ ಪಕ್ಷ ಈಗಾಗಲೇ ಈ ವಿಚಾರವಾಗಿ ಕೆಲವು ರಾಜ್ಯಗಳಲ್ಲಿ ತೀರ್ಮಾನ ಮಾಡಿದೆ. ಬಸವಣ್ಣನವರು ಹೇಳಿದಂತೆ ನುಡಿದಂತೆ ನಡೆಯಬೇಕು ಎಂಬುದು ನಮ್ಮ ಪಕ್ಷದ ಮೂಲ ಉದ್ದೇಶ. ರಾಜಸ್ಥಾನದಲ್ಲಿ ನಮ್ಮ ನಾಯಕರು ಈಗಾಗಲೇ ಈ ವಿಚಾರವಾಗಿ ಘೋಷಣೆ ಮಾಡಿದ್ದಾರೆ. ನಾವು ಅವರ ಜತೆ ಚರ್ಚೆ ಮಾಡಬೇಕಿದ್ದು, ಅಧಿವೇಶನದ ಹಿನ್ನೆಲೆಯಲ್ಲಿ ಭೇಟಿ ಆಗಿಲ್ಲ. ಈ ವಿಚಾರದಲ್ಲಿ ತೀರ್ಮಾನ ಕೈಗೊಂಡರೆ ಆಗುವ ಆರ್ಥಿಕ ಹೊರೆ ಸರಿದೂಗಿಸುವುದು ಹೇಗೆ ಎಂದು ರೂಪುರೇಷೆ ಮಾಡಲಾಗುತ್ತಿದೆ. ಅಧಿಕಾರಿಗಳ ಜತೆ ಮಾತನಾಡುತ್ತಿದ್ದೇನೆ ಎಂದು ಹೇಳಿದರು.

ನೀವೆಲ್ಲರೂ ಇಂದು ನೀಲಿ ಬಟ್ಟೆ ಧರಿಸಿ ಪ್ರತಿಭಟನೆ ಮಾಡುತ್ತಿದ್ದು, ನಾನು ನೀಲಿ ಕೋಟ್ ಧರಿಸಿದ್ದೇನೆ. ನನ್ನ ಭಾವನೆ ಏನು ಎಂದು ನಿಮಗೆ ಅರ್ಥವಾಗಿದೆ. ನಾನು ಸಿದ್ದರಾಮಯ್ಯ ಹಾಗೂ ರಾಜ್ಯದ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದು, ನಮ್ಮ ಪ್ರವಾಸದ ಸಮಯದಲ್ಲಿ ನಿಮ್ಮ ಸಹೋದ್ಯೋಗಿಗಳು ಅಲ್ಲಿ ಬಂದು ಮನವಿ ಮಾಡಬೇಕು. ಹಳ್ಳಿಯಿಂದ ಬೆಂಗಳೂರಿನವರೆಗೆ ಈ ಧ್ವನಿ ಬರಬೇಕು. ನಾನು ಇಲ್ಲಿ ಭರವಸೆ ಕೊಟ್ಟ ನಂತರ ನೀವು ಸುಮ್ಮನಾಗಬಾರದು. ಇಲ್ಲಿ ನೀವು ಹೇಳುತ್ತೀರಿ. ಅಲ್ಲಿ ಹೋದಾಗ ನಾವು ಸರ್ಕಾರಿ ಸಿಬ್ಬಂದಿ ನಮ್ಮನ್ನು ಅಮಾನತು ಮಾಡುತ್ತಾರೆ ಎಂದು ಹೆದರಿದರೆ ನಾವು ಏನಾಗಬೇಕು? ಹೀಗಾಗಿ ನಾವು ಎಲ್ಲಿ ಹೋಗುತ್ತೇವೆ ಅಲ್ಲಿ ನಿಮ್ಮ ಜನ ಬಂದು ಇದೇ ರೀತಿ ಬೆಂಬಲ ಸೂಚಿಸಬೇಕು. ಮುಂದಿನ ಒಂದು ತಿಂಗಳ ಒಳಗಾಗಿ ನಾವು ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ರಾಜ್ಯ ಪ್ರವಾಸ ಸಮಯದಲ್ಲಿ ನೀವು ಎಷ್ಟು ಬಲಿಷ್ಟರಾಗಿ ಇದ್ದೀರಿ ಎಂದು ಗೊತ್ತಾಗುತ್ತದೆ. ಆನಂತರ ನಾನು ಮಾತನಾಡುತ್ತೇನೆ. ಬೀದರ್ ನಿಂದ ಚಾಮರಾಜನಗರವರೆಗೂ ಇದೇ ಶಕ್ತಿ, ಬೆಂಬಲ ಇರಬೇಕು ಎಂದು ತಿಳಿಸಿದರು.

ನೀವು ನಿಮ್ಮ ಮಾತು ಉಳಿಸಿಕೊಂಡು, ಪ್ರತಿ ಹಳ್ಳಿಗಳಲ್ಲಿ ನನ್ನನ್ನು ಭೇಟಿ ಮಾಡಬೇಕು. ಪುರಂದರ ದಾಸರು ಒಂದು ಮಾತು ಹೇಳಿದ್ದಾರೆ. ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಪಡುಭನಾಭನ ಪಾದ ಭಜನೆಯ ಪರಮ ಸುಖವಯ್ಯ ಎಂದು ಹೇಳಿದ್ದಾರೆ. ಅದೇ ರೀತಿ ಇಂದು ನಾನು ನಿಮ್ಮೆಲ್ಲರ ಭೇಟಿ ಮಾಡುತ್ತಿರುವುದು ನನ್ನ ಭಾಗ್ಯ ಎಂದರು.

ನಿಮ್ಮ ಹೋರಾಟ ಈ ಸರ್ಕಾರ ಕಿತ್ತು ಹಾಕಲು ಇರಬೇಕು. ನಿಮ್ಮ ಹೋರಾಟ ವಿಧಾನಸೌಧದ ಮೂರನೇ ಮಹಡಿಯಲ್ಲಿ ನಮ್ಮನ್ನು ಕೂರಿಸಲು ಇರಬೇಕು. ನಿಮ್ಮ ಹೋರಾಟ ನುಡಿದಂತೆ ನಡೆಯುವ ಸರ್ಕಾರ ತರಲು ಇರಬೇಕು. ನೀವು ಅದಕ್ಕೆ ಸಿದ್ಧರಾಗಿ. ನಾವು ನಿಮ್ಮ ನೋವಿನಲ್ಲಿ ನಿಮ್ಮ ಜತೆ ಇದ್ದು, ನಿಮಗೆ ಯಾವ ರೀತಿ ಶಕ್ತಿ ತುಂಬಬೇಕು ಎಂದು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ
ನೀವು ಆಶಾಭಾವದಿಂದ ಇರಬೇಕು. ನಾನು ನಾಳೆ ಅಧಿವೇಶನಕ್ಕೆ ಹೋಗುತ್ತಿದ್ದು, ಕೇವಲ ನಾನು ಸಿದ್ದರಾಮಯ್ಯ ಮಾತ್ರ ತೀರ್ಮಾನ ಮಾಡಲು ಆಗುವುದಿಲ್ಲ. ಪಕ್ಷದ ಎಲ್ಲ ನಾಯಕರ ಜತೆ ಚರ್ಚೆ ಮಾಡುತ್ತೇವೆ. ದೆಹಲಿ ನಾಯಕರು ನಮಗೆ ಅಗತ್ಯ ಸೂಚನೆ ನೀಡಿದ್ದಾರೆ. ನಮ್ಮದು ಸಾಮೂಹಿಕ ನಾಯಕತ್ವ. ನಾವೆಲ್ಲರೂ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಅಗತ್ಯ ಘೋಷಣೆ ನೀಡುತ್ತೇವೆ. ನಿಮ್ಮ ಜತೆ ನಿಲ್ಲುತ್ತೇವೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular

Recent Comments