ಅಂಕೋಲಾ: ತಾಲೂಕಿನ ಮೇಲಿನ ಮಂಜಗುಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 50 ವಿದ್ಯಾರ್ಥಿಗಳಿದ್ದರೂ ಕೂಡ ಇಲ್ಲಿ ಒಂದೇ ಒಂದು ಖಾಯಂ ಶಿಕ್ಷಕರಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುವಂತಾಗಿದೆ. ಹೀಗಾಗಿ ತಕ್ಷಣ ಇಲ್ಲಿ ಶಿಕ್ಷಕರನ್ನು ನೇಮಕ ಮಾಡದಿದ್ದಲ್ಲಿ ಡಿ.26 ರಂದು ಮಂಜಗುಣಿಯ ಪುನೀತರಾಜಕುಮಾರ ಪ್ರತಿಮೆಯ ಎದುರು ವಿದ್ಯಾರ್ಥಿಗಳೊಂದಿಗೆ ಧರಣಿ ನಡೆಸಲು ಪಾಲಕರು ತೀರ್ಮಾನಿಸಿದ್ದಾರೆ.
ಈ ಶಾಲೆಯಲ್ಲಿ 50 ವಿದ್ಯಾರ್ಥಿಗಳಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನಾಲ್ಕು ಖಾಯಂ ಶಿಕ್ಷಕರ ಅಗತ್ಯವಿದೆ. ಆದರೆ ಈಗ ಅತಿಥಿ ಶಿಕ್ಷಕರೊಬ್ಬರಿದ್ದು, ಇನ್ನೂ ಮೂವರಿಗೆ ನಿಯೋಜನೆಯ ಮೇರೆಗೆ ಈ ಶಾಲೆಗೆ ಹಾಕಲಾಗಿದೆ. ಅವರಲ್ಲಿ ಒಬ್ಬರು ತುರ್ತು ರಜೆ ಪಡೆದರೆ, ಇನ್ನೊಬ್ಬರು ಸುದೀರ್ಘ ರಜೆಯ ಮೇಲಿದ್ದಾರೆ. ಹೀಗಾಗಿ ಇಬ್ಬರು ಶಿಕ್ಷಕರಿರುವುದರಿಂದ ಎಲ್ಲ ತರಗತಿಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ತೊಡಕಾಗುತ್ತದೆ.
ಈ ಕುರಿತು ಶಾಲಾಭಿವೃದ್ಧಿ ಸಮಿತಿ, ಪಾಲಕರು ಹಾಗೂ ಸಾರ್ವಜನಿಕರು ತಹಸೀಲ್ದಾರ್ ಉದಯ ಕುಂಬಾರ, ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಸೇರಿದಂತೆ ವಿವಿಧ ಅಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ನಿಯೋಜಿಸಲಾದ ಶಿಕ್ಷಕರು ಕೂಡ ರಜೆಯಲ್ಲಿರುವುದರಿಂದ ಇದು ಮಕ್ಕಳ ಮೇಲೆ ಪರಿಣಾಮ ಉಂಟಾಗಲಿದೆ.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಮಂಜುಳಾ ಹರಿಕಂತ್ರ, ಪಾಲಕರಾದ ಮಂಜುಳಾ ಬಿ. ಹರಿಕಂತ್ರ, ಮಾಲಾ ಮಂಜುನಾಥ ಹರಿಕಂತ್ರ, ಆಶಾ ಸಂತೋಷ ತಾಂಡೇಲ, ಗಾಂಧಾರಿ ಹರಿಕಂತ್ರ ಸೇರಿದಂತೆ ಇತರರಿದ್ದರು.