ಈ ಹಿಂದೆ ಗೋಕರ್ಣ ಪಂಚಾಯತದಿಂದ ಸಂಗ್ರಹಿಸುತ್ತಿದ್ದ ಕಸವನ್ನು ವಿಂಗಡಿಸಿ ಹಲವು ತ್ಯಾಜ್ಯವನ್ನು ಅಶೋಕೆ ಅರಣ್ಯ ಪ್ರದೇಶದಲ್ಲಿ ಹಾಕಲಾಗುತ್ತಿತ್ತು. ಆದರೆ ಈ ರಾಶಿಯ ಜೊತೆ ಕಡಲತೀರದಲ್ಲಿರುವ ಹೋಟೆಲ್, ರೆಸಾರ್ಟ್‌ನವರು ಕಸ ತಂದು ಸುರಿಯುತ್ತಿದ್ದರು.

ಇದರಿಂದ ಅಶೋಕೆ ಭಾಗದ ಜಾನುವಾರು ಮೇವಿಗೆ ಬಂದಾಗ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ನಮ್ಮ ಮನೆಗಳಿಗೂ ತೊಂದರೆಯಾಗುತ್ತಿದೆ ಎಂದು ಜನರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಮೂಲಕ ಮನವಿ ಸಲ್ಲಿಸಿ ಕಸ ಇಲ್ಲಿ ಹಾಕದಂತೆ ವಿನಂತಿಸಿ ಮುಂದುವರಿದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದರು.

ಈ ಜಾಗವನ್ನು ಖುದ್ದು ಪರಿಶೀಲನೆ ನಡೆಸಿದ ತಾಲೂಕಾ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಜನರ ಅಹವಾಲು ಸ್ಥಳದಲ್ಲೇ ಪಡೆದು ತಕ್ಷಣ ಸ್ವಚ್ಚಗೊಳಿಸುವಂತೆ ಸೂಚಿಸಿದರು. ಅದರಂತೆ ಭಾಗದಲ್ಲಿ ಸ್ವಚ್ಛಗೊಂಡಿದೆ. ಆದರೆ ಪ್ರಸ್ತುತ ಸಂಗ್ರಹವಾದ ಕಸವನ್ನು ಎಲ್ಲಿಯೂ ವಿಲೇವಾರಿ ಮಾಡಲಾಗದೆ ಇಲ್ಲಿನ ಮುಖ್ಯ ಕಡಲತೀರದ ಪಂಚಾಯತ ಬಳಿ ಇರುವ ಜಾಗದಲ್ಲಿ ತಂದು ಸುರಿಯಲಾಗುತ್ತಿದೆ.

ಪರಿಣಾಮ ಸುಂದರ ಕಡಲತೀರದಲ್ಲಿ ಗಬ್ಬುವಾಸನೆ ಜೊತೆ ದನಗಳು ಪ್ಲಾಸ್ಟಿಕ್ ತಿಂದು ಹರಡುತ್ತಿದ್ದು, ಈ ಭಾಗದ ಭಾಗದ ನಿವಾಸಿಗಳಿಗೂ ತೊಂದರೆಯಾಗುತ್ತಿದೆ ಎಂದು ಇಲ್ಲಿನ ಗ್ರಾಂ. ಪಂ. ಸದಸ್ಯೆ ಸುರ್ವಣಾ ಅಡ್ಡಕರ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.