ಬೆಂಗಳೂರು: ಘನತ್ಯಾಜ್ಯ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 172 ಕಿರಿಯ ಆರೋಗ್ಯ ಪರಿವೀಕ್ಷಕರಿಗೆ ಜುಲೈನಿಂದ ಬಿಬಿಎಂಪಿ ವೇತನ ಬಿಡುಗಡೆ ಮಾಡಿಲ್ಲ.
ಬಿಬಿಎಂಪಿಯಲ್ಲಿ 2019ರಿಂದ ಗುತ್ತಿಗೆ ಆಧಾರದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಕಿರಿಯ ಆರೋಗ್ಯ ಪರಿವೀಕ್ಷಕ ಅಥವಾ ಘನತ್ಯಾಜ್ಯ ನಿರ್ವಹಣೆ ಪರಿವೀಕ್ಷಕ (ಜೆಎಚ್‌ಐ) ಎಂದು ನೇಮಿಸಿಕೊಳ್ಳಲಾಗುತ್ತಿದೆ. 2022ರ ಜೂನ್‌ವರೆಗೆ 120 ಜೆಎಚ್‌ಐಗಳಿದ್ದರು. ಜುಲೈನಲ್ಲಿ ಮತ್ತೆ 52 ಜೆಎಚ್‌ಐಗಳನ್ನು ನೇಮಿಸಿಕೊಳ್ಳಲಾಗಿದ್ದು, ಅಂದಿನಿಂದ 172 ಜೆಎಚ್ಐಗಳಿಗೂ ವೇತನ ಪಾವತಿ ಮಾಡಿಲ್ಲ. ಹೊಸ ಏಜೆನ್ಸಿಯವರೊಂದಿಗೆ ಒಪ್ಪಂದ ಪ್ರಕ್ರಿಯೆ ವಿಳಂಬ ಇದಕ್ಕೆ ಕಾರಣ ಎನ್ನಲಾಗಿದೆ.
‘ಹೊಸ ಒಪ್ಪಂದ ಪ್ರಕ್ರಿಯೆಯಾದರೆ ಹೊಸದಾಗಿ ಬಂದ 52 ಮಂದಿಗೆ ವೇತನ ತೊಂದರೆಯಾಗಬೇಕಿತ್ತು. ಆದರೆ, ಹಳೆಯ ಜೆಎಚ್‌ಐಗಳಿಗೂ ವೇತನ ಪಾವತಿಯಾಗಿಲ್ಲ. ಏಜೆನ್ಸಿಯವರನ್ನು ಕೇಳಿದರೆ ಬಿಬಿಎಂಪಿ ಹಣ ಬಿಡುಗಡೆ ಮಾಡಿಲ್ಲ ಎನ್ನುತ್ತಾರೆ. ವೇತನದ ಜವಾಬ್ದಾರಿ ಹೊಂದಿರುವ ಘನತ್ಯಾಜ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಕೇಳಿದರೆ, ಹಿರಿಯ ಅಧಿಕಾರಿಗಳನ್ನು ಕೇಳಬೇಕು ಎನ್ನುತ್ತಾರೆ. ವೇತನ ಇಲ್ಲದೆ, ಸಾಕಷ್ಟು ಸಂಕಷ್ಟ ಎದುರಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಜೆಎಚ್‌ಐಗಳು ಅಳಲು ತೋಡಿಕೊಂಡರು.
‘ಬೆಳಿಗ್ಗೆ 6.30ಕ್ಕೆ ಮಸ್ಟರಿಂಗ್ ಕೇಂದ್ರದಲ್ಲಿ ಬಯೊಮೆಟ್ರಿಕ್ ಹಾಜರಿ ನೀಡಬೇಕು. ಪೌರಕಾರ್ಮಿಕರೊಂದಿಗೆ ಸಮನ್ವಯ ಸಾಧಿಸಿ ಘನತ್ಯಾಜ್ಯ ನಿರ್ವಹಣೆ ಮಾಡಬೇಕು. ಮಧ್ಯಾಹ್ನ 2ಕ್ಕೆ ಮತ್ತೆ ಬಯೊಮೆಟ್ರಿಕ್ ಹಾಜರಿ ನೀಡಬೇಕು. ವೇತನ ಇಲ್ಲದೆ ಬಡ್ಡಿಗೆ ಹಣ ತಂದಿದ್ದೇವೆ’ ಎಂದರು.
ಪ್ರತಿ ಗುತ್ತಿಗೆ ಜೆಎಚ್‌ಐಗೆ ಬಿಬಿಎಂಪಿ ₹28,500 ವೇತನ ನೀಡುತ್ತಿದ್ದು, ಅವರನ್ನು ಒದಗಿಸಿರುವ ಕ್ಷೀಮ್ ವೆಂಚರ್ಸ್ ಏಜೆನ್ಸಿ ಸೇವಾ ವೆಚ್ಚವಾಗಿ ₹1,500 ಕಡಿತ ಮಾಡಿಕೊಳ್ಳುತ್ತದೆ. ಪಿ.ಎಫ್ ಕಡಿತವಾಗಿ ಸುಮಾರು ₹24 ಸಾವಿರ ವೇತನ ಸಿಗುತ್ತಿದೆ.