ನವದೆಹಲಿ: ನೆಲಮಂಗಲ–ತುಮಕೂರು ನಡುವಿನ ಆರು ಪಥದ ಹೆದ್ದಾರಿ ಕಾಮಗಾರಿ 2025ರ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಜಗ್ಗೇಶ್ ಬುಧವಾರ ಕೇಳಿರುವ ಲಿಖಿತ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ‘ಆರು ಪಥದ ಕಾಮಗಾರಿಯಲ್ಲಿ ತುಮಕೂರು ಬೈಪಾಸ್ ಕಾಮಗಾರಿಯೂ ಸೇರಿದೆ. ಈ ಕಾಮಗಾರಿಯನ್ನು ಎರಡು ಹಂತಗಳಾಗಿ ವಿಭಜಿಸಲಾಗಿದೆ. ಮೊದಲ ಹಂತದಲ್ಲಿ ಸರ್ವಿಸ್ ರಸ್ತೆ ಹಾಗೂ ಎರಡನೇ ಹಂತದಲ್ಲಿ ಮುಖ್ಯ ರಸ್ತೆ ನಿರ್ಮಾಣ ಮಾಡಲಾಗಿದೆ. ಮೊದಲ ಹಂತದ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ‘ದೇಶದಲ್ಲಿ 2021ರಲ್ಲಿ ಸಂಭವಿಸಿದ ಒಟ್ಟು ರಸ್ತೆ ಅಪಘಾತಗಳಲ್ಲಿ ಶೇ 54ರಷ್ಟು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಆಗಿವೆ’ ಎಂದು ತಿಳಿಸಿದ್ದಾರೆ.
ನಾಮನಿರ್ದೇಶಿತ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ‘ಕರ್ನಾಟಕದಲ್ಲಿ ಈ ವರ್ಷದ ಮಳೆಗಾಲದಲ್ಲಿ ಹಾನಿಗೀಡಾದ ರಾಷ್ಟ್ರೀಯ ಹೆದ್ದಾರಿಗಳನ್ನು ಪರಿಶೀಲನೆ ನಡೆಸಿ ದುರಸ್ತಿ ಮಾಡಲಾಗಿದ್ದು, ಈಗ ಸಂಚಾರ ಯೋಗ್ಯವಾಗಿವೆ. ಕರ್ನಾಟಕದಲ್ಲಿ ಹೆದ್ದಾರಿಗಳ ನಿರ್ವಹಣೆಗೆ ಈ ವರ್ಷ ₹52.51 ಕೋಟಿ ಮೀಸಲಿಡಲಾಗಿದೆ. ಈ ಪೈಕಿ ₹19.08 ಕೋಟಿಯನ್ನು ಖರ್ಚು ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.