Tuesday, June 6, 2023
Homeಕ್ರೈಂ ಸುದ್ದಿಕೋರಮಂಗಲದ ಜೋಡಿ ಕೊಲೆ, ದರೋಡೆ ಕೇಸ್: ಉದ್ಯಮಿ ಚಾಲಕನೇ ಮಾಸ್ಟರ್‌ಮೈಂಡ್

ಕೋರಮಂಗಲದ ಜೋಡಿ ಕೊಲೆ, ದರೋಡೆ ಕೇಸ್: ಉದ್ಯಮಿ ಚಾಲಕನೇ ಮಾಸ್ಟರ್‌ಮೈಂಡ್

ಬೆಂಗಳೂರು: ಕೋರಮಂಗಲದ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಕೆಲಸಗಾರ ಕರಿಯಪ್ಪ (45) ಹಾಗೂ ಭದ್ರತಾ ಸಿಬ್ಬಂದಿ ಬಹದ್ದೂರ್ (28) ಎಂಬುವವರನ್ನು ಕೊಂದು ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಜಗದೀಶ್, ಉದ್ಯಮಿ ಗೋಪಾಲ್‌ ರೆಡ್ಡಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಾಲೀಕರ ಕಾರನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದರಿಂದ ಎರಡು ತಿಂಗಳ ಹಿಂದೆಯಷ್ಟೇ ಆತನನ್ನು ಕೆಲಸದಿಂದ ತೆಗೆಯಲಾಗಿತ್ತು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ಜಗದೀಶ್‌ನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಉದ್ಯಮಿ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಇರುವ ಮಾಹಿತಿ ತಿಳಿದಿದ್ದ ಜಗದೀಶ್, ಹೆಗ್ಗನಹಳ್ಳಿಯ ಬಾಲ್ಯ ಸ್ನೇಹಿತರಾದ ಅಭಿಷೇಕ್ ಹಾಗೂ ಕಿರಣ್ ಜೊತೆ ಸೇರಿ ದರೋಡೆಗೆ ಸಂಚು ರೂಪಿಸಿದ್ದ. ಬೇಗನೆ ಶ್ರೀಮಂತರಾಗಿ ಐಷಾರಾಮಿ ಜೀವನ ನಡೆಸಬೇಕು ಎಂಬುದು ಆರೋಪಿಗಳ ಉದ್ದೇಶವಾಗಿತ್ತು’ ಎಂದು ಅವರು ಹೇಳಿದರು.

ಕೆಲಸಗಾರನ ಜೊತೆ ಒಡನಾಟ: ‘ಕೆಲಸ ಬಿಟ್ಟ ಬಳಿಕವೂ ಆರೋಪಿ ಜಗದೀಶ್, ಕೆಲಸಗಾರ ಕರಿಯಪ್ಪ ಅವರಿಗೆ ಆಗಾಗ ಕರೆ ಮಾಡುತ್ತಿದ್ದ. ಉದ್ಯಮಿ ಹಾಗೂ ಅವರ ಕುಟುಂಬದ ಬಗ್ಗೆ ವಿಚಾರಿಸುತ್ತಿದ್ದ. ಡಿ. 17ರಂದು ಕರೆ ಮಾಡಿದ್ದ ಜಗದೀಶ್, ಉದ್ಯಮಿ ಬಗ್ಗೆ ಕೇಳಿದ್ದ. ‘ಉದ್ಯಮಿ ಕುಟುಂಬದವರು ಸಂಬಂಧಿಕರ ಮದುವೆಗೆಂದು ಬೇರೆ ಊರಿಗೆ ಹೋಗಿದ್ದಾರೆ’ ಎಂಬುದಾಗಿ ಕರಿಯಪ್ಪ ಹೇಳಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಉದ್ಯಮಿ ಮನೆಯಲ್ಲಿಲ್ಲ ಎಂಬುದನ್ನು ಸ್ನೇಹಿತರಿಗೆ ತಿಳಿಸಿದ್ದ ಆರೋಪಿ, ದರೋಡೆ ಮಾಡಲು ಸಜ್ಜಾಗಿದ್ದ. ಉದ್ಯಮಿ ಮನೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳು ಎಲ್ಲೆಲ್ಲಿವೆ ಎಂಬುದು ಜಗದೀಶ್‌ನಿಗೂ ಗೊತ್ತಿತ್ತು. ಹೀಗಾಗಿ, ಆತನೇ ಮೊದಲು ಮನೆಯ ಹಿಂಬದಿಯಿಂದ ಕಾಂಪೌಂಡ್‌ ಜಿಗಿದು ಒಳಗೆ ನುಗ್ಗಿದ್ದ. ಕ್ಯಾಮೆರಾ ತಂತಿ ಕತ್ತರಿಸಿದ್ದ. ನಂತರ, ಸ್ನೇಹಿತರಿಬ್ಬರನ್ನು ಮನೆಯೊಳಗೆ ಕರೆಸಿಕೊಂಡಿದ್ದ’ ಎಂದು ಹೇಳಿವೆ.

‘ಕಾವಲು ಕಾಯುತ್ತಿದ್ದ ಭದ್ರತಾ ಸಿಬ್ಬಂದಿ ದಿಲ್ ಬಹದ್ದೂರ್ ಮೇಲೆ ದಾಳಿ ಮಾಡಿದ್ದ ಆರೋಪಿಗಳು ಉಸಿರುಗಟ್ಟಿಸಿ ಕೊಂದಿದ್ದರು. ಕೈ–ಕಾಲುಗಳನ್ನು ಟೇಪ್‌ನಿಂದ ಸುತ್ತಿ ನೀರಿನ ಸಂಪ್‌ಗೆ ಎಸೆದಿದ್ದರು. ನಂತರ, ಚಾವಣಿ ಬಾಗಿಲು ಮೂಲಕ ಮನೆಯೊಳಗೆ ನುಗ್ಗಿ ಅಡಗಿ ಕುಳಿತಿದ್ದರು.’

‘ನಸುಕಿನ 6 ಗಂಟೆ ಸುಮಾರಿಗೆ ಕೆಲಸಕ್ಕೆಂದು ಕರಿಯಪ್ಪ ಮನೆಗೆ ಬಂದು ಬಾಗಿಲು ತೆರೆದಿದ್ದರು. ಅವರ ಮೇಲೂ ದಾಳಿ ಮಾಡಿದ್ದ ಆರೋಪಿಗಳು, ರಾಡ್‌ನಿಂದ ತಲೆಗೆ ಹೊಡೆದಿದ್ದರು. ನಂತರ, ಉಸಿರುಗಟ್ಟಿಸಿ ಕೊಂದಿದ್ದರು. ಬಳಿಕ, ಮನೆಯಲ್ಲಿದ್ದ ₹ 5 ಲಕ್ಷ ನಗದು ಹಾಗೂ 100 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು’ ಎಂದು ತಿಳಿಸಿವೆ.

RELATED ARTICLES
- Advertisment -
Google search engine

Most Popular

Recent Comments