ಬೆಂಗಳೂರು: ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರು, ವೈದ್ಯಾಧಿಕಾರಿಗಳ ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಡಿ. 23ರಂದು ಬೆಳಗಾವಿ ಸುವರ್ಣಸೌಧದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ಎನ್‌ಐಎಂಎ) ತಿಳಿಸಿದೆ.
‘ಸರ್ಕಾರಿ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ವೈದ್ಯ ಪದ್ಧತಿಯ ವೈದ್ಯರಿಗೆ (ಆಯುಷ್ ಪದ್ಧತಿಗಳು) ವೇತನ ತಾರತಮ್ಯ ಮಾಡಲಾಗುತ್ತಿದೆ. ಎಂಬಿಬಿಎಸ್ ವೈದ್ಯರಿಗೆ ಅಧಿಕ ವೇತನ ಬಿಎಎಂಎಸ್ ಮತ್ತು ಬಿಯುಎಂಎಸ್ ವೈದ್ಯರಿಗೆ ಕಡಿಮೆ ವೇತನ ನೀಡುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಎಲ್ಲ ವೈದ್ಯರಿಗೆ ಸಮಾನ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.
‘2016ರಲ್ಲಿ ಸ್ಥಗಿತಗೊಂಡಿರುವ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಬೇಕು. ಕಳೆದ ಆರು ವರ್ಷಗಳಿಂದ ಮಂಡಳಿಯ ಕಾರ್ಯಚಟುವಟಿಕೆಗಳಿಲ್ಲದೇ ಸ್ಥಗಿತಗೊಂಡಿದೆ. ಇದರಲ್ಲಿ ನೋಂದಾಯಿತ ವೈದ್ಯರಿಗೆ ಯಾವುದೇ ರೀತಿಯ ಸಹಾಯ, ಸೌಲಭ್ಯಗಳು ದೊರೆಯುತ್ತಿಲ್ಲ. ಇದರಿಂದ ಮಂಡಳಿಯ ಅಭಿವೃದ್ಧಿ ಕಾರ್ಯಕ್ರಮಗಳು ನಿಷ್ಕ್ರಯಗೊಂಡಿವೆ’ ಎಂದು ಡಾ.ಕೆ.ಸಿ. ಬಲ್ಲಾಳ ಆರೋಪಿಸಿದರು.
‘ಈ ಕುರಿತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.