ಬೆಂಗಳೂರು: ರಸ್ತೆಗುಂಡಿಗಳ ದೂರುಗಳನ್ನು ಆಯಾ ವಾರ್ಡ್ ಎಂಜಿನಿಯರ್ ಪರಿಗಣಿಸಬೇಕು
ಈ ತಿಂಗಳ ಅಂತ್ಯದೊಳಗೆ ಪ್ರಮುಖ ರಸ್ತೆಗಳಲ್ಲಿರುವ ಎಲ್ಲ ಗುಂಡಿ ಮುಚ್ಚಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ‘ಫಿಕ್ಸ್ ಮೈ ಸ್ಟ್ರೀಟ್’ ಆ್ಯಪ್ ಜ. 1, 2023 ರಿಂದ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಆ್ಯಪ್ ಮೂಲಕ ನಗರದಲ್ಲಿ ಎಲ್ಲಿ ರಸ್ತೆಗುಂಡಿಗಳಿವೆ ಎಂಬುದನ್ನು ವರದಿ ಮಾಡಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತಾಂತ್ರಿಕ ದೋಷಗಳಿಂದ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಆ್ಯಪ್‌ನಲ್ಲಿರುವ ಕೆಲವು ತಾಂತ್ರಿಕ ದೋಷಗಳನ್ನು ಅಧಿಕಾರಿಗಳು ಸರಿಪಡಿಸುತ್ತಿದ್ದಾರೆ. ಜನವರಿ 1ರಿಂದ ಸಾರ್ವಜನಿಕರು ಈ ಆ್ಯಪ್ ಮೂಲಕ ನಗರದಲ್ಲಿ ಎಲ್ಲಿ ಸಮಸ್ಯೆಗಳಿವೆ ಎಂಬ ಬಗ್ಗೆ ದೂರು ನೀಡಬಹುದು” ಎಂದರು.
“ಜನರು ಆ್ಯಪ್‌ನಲ್ಲಿ ರಸ್ತೆಗುಂಡಿಗಳ ಬಗ್ಗೆ ಕಳುಹಿಸಿದ ದೂರುಗಳನ್ನು ಆಯಾ ವಾರ್ಡ್‌ನ ಎಂಜಿನಿಯರ್‍ಗಳು ಪರಿಗಣಿಸಬೇಕು. ಈ ತಿಂಗಳ ಅಂತ್ಯದೊಳಗೆ ಪ್ರಮುಖ ರಸ್ತೆಗಳಲ್ಲಿರುವ ಎಲ್ಲ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಹೇಳಿದರು.
“ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ದೂರು ದಾಖಲಿಸಿದ ನಂತರ ಸ್ವಯಂಚಾಲಿತವಾಗಿ ಆ ಸಮಸ್ಯೆಯನ್ನು ಸರಿಪಡಿಸುವ ಕಾರ್ಯ ಆರಂಭವಾಗುತ್ತದೆ. ನಗರದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ನಿರ್ವಹಣೆಯನ್ನು ‘ಪೈಥಾನ್’ ಗುತ್ತಿಗೆದಾರರಿಗೆ ವಹಿಸಲಾಗುತ್ತದೆ” ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.
ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಹಿನ್ನೆಲೆ
ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಎಂಬ ಯೋಜನೆ ಬಂದು 5 ವರ್ಷಗಳು ಕಳೆದರೂ ಇಲ್ಲಿಯವರೆಗೂ ಸಾರ್ವಜನಿಕರಿಗೆ ಈ ಆ್ಯಪ್ ಮುಕ್ತವಾಗಿರಲಿಲ್ಲ. ನಗರದಲ್ಲಿರುವ ಸಮಸ್ಯೆಗಳನ್ನು ತಿಳಿಸಲು ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
ನಾಗರಿಕರು ನೇರವಾಗಿ ವಾರ್ಡ್ ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಈ ಮೊಬೈಲ್ ಅಪ್ಲಿಕೇಶನ್ ಅನ್ನು 2017 ರಲ್ಲಿ ಪ್ರಾರಂಭಿಸಲಾಯಿತು. ಆದರೆ, ತಾಂತ್ರಿಕ ದೋಷಗಳ ಕಾರಣದಿಂದ ಇದನ್ನು 2019ರಲ್ಲಿ ಸಾರ್ವಜನಿಕರಿಗೆ ಸಿಗದಂತೆ ಮಾಡಲಾಯಿತು.
ಕಳೆದ ಕೆಲವು ತಿಂಗಳುಗಳ ಹಿಂದೆ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಮುಕ್ತ ಮಾಡಲಾಗಿತ್ತು. ಆದರೂ, ಕೆಲವು ತಾಂತ್ರಿಕ ದೋಷಗಳಿಂದ ಈ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದೀಗ ಐದು ವರ್ಷಗಳ ನಂತರ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಸಾರ್ವಜನಿಕರಿಗೆ ಜ.1ರಂದು ಮುಕ್ತವಾಗುತ್ತಿದೆ.