Tuesday, June 6, 2023
Homeರಾಜ್ಯಕ್ಯಾನ್ಸರ್ ತಡೆಗೆ ಮುಖ್ಯಮಂತ್ರಿಗಳು ಹೆಚ್ಚು ಒತ್ತು ನೀಡಲಿ: ಶಾಸಕ ಬಂಡೆಪ್ಪ ಖಾಶೆಂಪುರ್

ಕ್ಯಾನ್ಸರ್ ತಡೆಗೆ ಮುಖ್ಯಮಂತ್ರಿಗಳು ಹೆಚ್ಚು ಒತ್ತು ನೀಡಲಿ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್: ಈ ಮುಂಚೆ ವಿದೇಶಗಳಲ್ಲಿ ಹೆಚ್ಚಾಗಿದ್ದ ಕ್ಯಾನ್ಸರ್ ಕಾಯಿಲೆ ಇತ್ತೀಚೆಗೆ ಭಾರತದಲ್ಲಿ ಕೂಡ ಹೆಚ್ಚುತ್ತಿದೆ. ಕ್ಯಾನ್ಸರ್ ಪತ್ತೆಹಚ್ಚಿ ತಡೆಗಟ್ಟುವ ಕಡೆಗೆ ಮುಖ್ಯಮಂತ್ರಿಗಳು ಹೆಚ್ಚಿನ ಗಮನಹರಿಸಲಿ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಮೊದಲ ದಿನದ ಕಲಾಪದಲ್ಲಿ ಪಾಲ್ಗೊಂಡು, ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿರವರು ತಂದ ಸಂತಾಪ ಸೂಚನೆಗೆ ಬೆಂಬಲಿಸಿ ಮಾತನಾಡಿದ ಅವರು, ಕ್ಯಾನ್ಸರ್ ಪ್ರಮಾಣ ತಡೆಗಟ್ಟುವ ನಿಟ್ಟಿನಲ್ಲಿ ಹಳ್ಳಿಗಳ ಮಟ್ಟದಲ್ಲಿ ಡಿಟೆಕ್ಷನ್ ಟೆಸ್ಟ್ ಮಾಡಿಸಿ ಪ್ರಿವೆನ್ಷನ್ ಮಾಡಿದರೆ ಒಳ್ಳೆದು ಅನಿಸುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ವಿಧಾನ ಸಭೆಯ ಹಾಲಿ ಉಪ ಸಭಾಧ್ಯಕ್ಷರಾಗಿದ್ದ ಆನಂದ ಅಲಿಯಾಸ್ ವಿಶ್ವನಾಥ್ ಚಂದ್ರಶೇಖರ ಮಾಮನಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್, ರಾಜ್ಯಸಭೆಯ ಮಾಜಿ ಸದಸ್ಯರಾಗಿದ್ದ ಅಬ್ದುಲ್ ಸಮದ್ ಸಿದ್ದಿಕಿ, ಲೋಕಸಭೆಯ ಮಾಜಿ ಸದಸ್ಯರಾಗಿದ್ದ ಕೋಳೂರು ಬಸವನಗೌಡ, ರಾಜ್ಯದ ಮಾಜಿ ಸಚಿವರುಗಳಾಗಿದ್ದ ಜಬ್ಬಾರಖಾನ್ ಹೊನ್ನಳ್ಳಿ, ಸುಧೀಂದ್ರರಾವ್ ಕಸ್ಬೆ, ವಿಧಾನಸಭೆಯ ಮಾಜಿ ಸದಸ್ಯರುಗಳಾಗಿದ್ದ ಎನ್.ಟಿ. ಬೊಮ್ಮಣ್ಣ, ಶ್ರೀಶೈಲಪ್ಪ ಬಿದರೂರು, ಕುಂಬ್ಳೆ ಸುಂದರರಾವ್, ಶಂಕರಗೌಡ ಎನ್. ಪಾಟೀಲ್ ರವರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ವಿಧಾನ ಸಭೆಯ ಹಾಲಿ ಉಪ ಸಭಾಧ್ಯಕ್ಷರಾಗಿದ್ದ ಆನಂದ ಮಾಮನಿರವರ ನಿಧನದ ಸುದ್ದಿ ಕೇಳಿ ಎಲ್ಲರಿಗೂ ಆಘಾತವಾಗಿದೆ. ಅವರು ಬಹಳ ಸೌಮ್ಯ ವ್ಯಕ್ತಿತ್ವದವರಾಗಿದ್ದರು. ನಮ್ಮ ಜೆಡಿಎಲ್ಫಿ ಆಫೀಸ್ ಅವರ ಆಫೀಸ್ ನ ಪಕ್ಕದಲ್ಲೇ ಇರುವುದರಿಂದ ನಾವು ಬರುವಾಗ ಹೋಗುವಾಗ ಅವರನ್ನು ಮಾತಾಡಿಸಿಕೊಂಡು ಹೋಗ್ತಿದ್ವಿ. ಅವರು ಮೂರು ಬಾರಿ ಶಾಸಕರಾಗಿದ್ದರು. ಅಲ್ಲದೇ ಉದ್ಯಮಿ (ವ್ಯಾಪಾರಸ್ಥರು) ಕೂಡ ಆಗಿದ್ದರು. ಬೇರೆ ಬೇರೆ ಸಂಸ್ಥೆಗಳಿಗೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಅವರು ಕ್ಯಾನ್ಸರ್ ನಿಂದ ನಿಧನ ಹೊಂದಿರುವುದು ದುಃಖದ ವಿಷಯವಾಗಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ರವರು 10 ಬಾರಿ ಉತ್ತರ ಪ್ರದೇಶದಲ್ಲಿ ಶಾಸಕರು, ಒಂದು ಬಾರಿ ವಿಧಾನ ಪರಿಷತ್, 07 ಬಾರಿ ಲೋಕಸಭಾ ಸದಸ್ಯರು ಹಾಗೂ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ ಅವರು ಕುಸ್ತಿಪಟು ಆಗಿದ್ದದ್ದನ್ನು ಗುರುತಿಸಿ ಅವರನ್ನು ರಾಜಕೀಯಕ್ಕೆ ತರಲಾಗಿತ್ತು. ಕರ್ನಾಟಕದವರೇ ಆದ ಹೆಚ್.ಡಿ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಅವರಿಗೆ ಗೃಹ ಸಚಿವ ಸ್ಥಾನ ನೀಡಲಾಗಿತ್ತು. ಅವರು ಸಾಮಾಜಿಕ ನ್ಯಾಯದ ಪರವಾಗಿ ಬಹಳಷ್ಟು ಹೋರಾಟ ಮಾಡಿದ್ದರು.

ರಾಜ್ಯಸಭೆಯ ಮಾಜಿ ಸದಸ್ಯರಾಗಿದ್ದ ಅಬ್ದುಲ್ ಸಮದ್ ಸಿದ್ದಿಕಿರವರು ನಮ್ಮ ರಾಯಚೂರು ಭಾಗದವರು, ರಾಯಚೂರು ಮಾತ್ರವಲ್ಲದೇ ಕಲಬುರಗಿ, ಬೀದರ್ ಕಡೆ ಯಾವಾಗ ಬಂದರು ಕೂಡ ಅವರು ಒಳ್ಳೆಯ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು. ಈಗಲೂ ಅವರ ಕುಟುಂಬದವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಇನ್ನೂ ರಾಜ್ಯದ ಮಾಜಿ ಸಚಿವರಾದ ಸುಧೀಂದ್ರರಾವ್ ಕಸ್ಬೆರವರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸದಸ್ಯರಾಗಿ ಕೆಲಸ ಮಾಡಿದ್ದರು. ರಾಯಚೂರಿನ ಸ್ಕೌಡ್ಸ್ ಮತ್ತು ಗೈಡ್ಸ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು.

ವಿಧಾನಸಭೆಯ ಮಾಜಿ ಸದಸ್ಯರಾದ ಎನ್.ಟಿ. ಬೊಮ್ಮಣ್ಣರವರು, ಇತ್ತೀಚೆಗೆ ನಮ್ಮ ಜೊತೆಗೆ ಇದ್ದರು. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದಿಂದಲೇ ಸ್ಪರ್ಧೆ ಮಾಡಿದ್ದರು. ನಮ್ಮ ಪಕ್ಷದ ಅಧ್ಯಕ್ಷರಾಗಿ ಕೂಡ ಕೆಲಸ ಮಾಡಿದ್ದರು. ವಿರೋಧ ಪಕ್ಷದ ನಾಯಕರು ಹೇಳಿದಂತೆ ಅವರು ಬಹಳಷ್ಟು ಸೌಮ್ಯ ಹೃದಯದ ವ್ಯಕ್ತಿಯಾಗಿದ್ದರು. ಇನ್ನೂ ಶ್ರೀಶೈಲಪ್ಪ ಬಿದರೂರುರವರು, ಕಾಂಗ್ರೆಸ್ ಆಫೀಸ್ ನ ಸಭೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಇತ್ತೀಚೆಗೆ ನಿಧನರಾದ ಅವರೆಲ್ಲರ ಆತ್ಮಕ್ಕೆ ಶಾಂತಿ ಲಭಿಸಲಿ, ಮೃತರ ಕುಟುಂಬ ವರ್ಗದವರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಂತಾಪ ವ್ಯಕ್ತಪಡಿಸಿದರು.

 

RELATED ARTICLES
- Advertisment -
Google search engine

Most Popular

Recent Comments