ಚಿಕ್ಕಬಳ್ಳಾಪುರ: ಜಿಲ್ಲೆಯು ೧೫ ವರ್ಷಗಳನ್ನು ಪೂರೈಸಿ ಯಶಸ್ವಿಯ ಮುನ್ನೆಡೆಯುತ್ತಿರುವ ಸಂಭ್ರಮದಲ್ಲಿ ಮೈಸೂರು ದಸರಾ, ಹಂಪಿ ಉತ್ಸವ, ಬೆಂಗಳೂರು ಉತ್ಸವ, ಕರಾವಳಿ ಮತ್ತು ಕಾರ್ಕಳ ಉತ್ಸವಗಳಂತೆಯೇ ೨೦೨೩ ರ ಜನವರಿ ೭ ರಿಂದ ಜ.೧೪ರ ವರೆಗೆ “ಚಿಕ್ಕಬಳ್ಳಾಪುರ ಉತ್ಸವ”ವನ್ನು ಜಿಲ್ಲಾ ಕೇಂದ್ರದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಕ್ರೀಡಾಪಟುಗಳು, ಖ್ಯಾತ ಸಿನಿಮಾ ಕಲಾವಿದರು ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದರು. ಅವರು ಸೋಮವಾರ ಜಿಲ್ಲಾ ಪಂಚಾಯತ್ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಐತಿಹಾಸಿಕ ಸ್ಥಳಗಳ ಪ್ರಾಮುಖ್ಯತೆಯನ್ನು ಜಗತ್ತಿಗೆ ಪಸರಿಸಬೇಕಿದೆ ಈ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಉತ್ಸವವನ್ನು ಜಿಲ್ಲೆಯಲ್ಲಿ ಚೊಚ್ಚಲವಾಗಿ ಆಯೋಜಿಸಲಾಗುತ್ತಿದೆ.ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ನಾಡಿನ ಸಮಸ್ತ ಜನತೆಗೆ ಮುಕ್ತ ಆಹ್ವಾನವಿದೆ. ಎಲ್ಲರು ಆಗಮಿಸಿ ಉತ್ಸವವನ್ನು ಯಶಸ್ವಿಯಾಗಿ ಆಚರಿಸಲು ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಕೋರಿದರು. ಚಿಕ್ಕಬಳ್ಳಾಪುರ ನಗರ ದಸರಾ ವೈಭವ ರೀತಿಯಲ್ಲಿ ದೀಪಾಲಂಕಾರಗಳಿಂದ ಕಂಗೊಳಿಸಲಿದೆ. ವಿವಿಧ ವಸ್ತು ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ, ಆರೋಗ್ಯ ಮೇಳ, ಫಲಪುಷ್ಪ ಪ್ರದರ್ಶನ, ಊರ ಹಬ್ಬ,ಗಾಳಿಪಟ ಸ್ಪರ್ಧೆ, ಕುಸ್ತಿ ಸ್ಪರ್ಧೆ,ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ವಾರಪೂರ್ತಿ ನಡೆಯಲಿವೆ. ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ಹೇಳಿದರು. ಪ್ರತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲು ಸುಮಾರು ಒಂದು ಕೋಟಿ ರೂ ವೆಚ್ಚವನ್ನು ಮೀಸಲಿಡಲಾಗಿದೆ. ಪ್ರಥಮ ಬಹುಮಾನ ಒಂದು ಲಕ್ಷ ರೂ, ದ್ವಿತೀಯ ೭೫ ಸಾವಿರ ರೂ, ತೃತೀಯ ೫೦ ಸಾವಿರ ರೂಗಳು ಇರುತ್ತದೆ. ಈ ನಿಟ್ಟಿನಲ್ಲಿ ಆಸಕ್ತರು ಸ್ಪರ್ಧಿಸಿ ಬಹುಮಾನವನ್ನು ಗೆಲ್ಲಬಹುದು ಎಂದು ಹೇಳಿದರು. ಹೆಸರಾಂತ ಕಲಾವಿದರ ಪಟ್ಟಿ: ಸ್ಯಾಂಡಲ್ ವುಡ್ ನಿಂದ ದರ್ಶನ್, ಯಶ್, ಸುದೀಪ್, ರಿಷಬ್ ಶೆಟ್ಟಿ, ಧನಂಜಯ್, ವಿಜಯ್ ಪ್ರಕಾಶ್, ಅನನ್ಯ ಭಟ್, ರಾಜೇಶ್ ಕೃಷ್ಣನ್ ಆಗಮಿಸಲಿದ್ದಾರೆ. ಟಾಲಿವುಡ್ ನಿಂದ ಜೂನಿಯರ್ ಎನ್.ಟಿ.ಆರ್., ರಾಮ್ ಚರಣ್, ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ಆಗಮಿಸಲಿದ್ದಾರೆ ಎಂದು ಹೇಳಿದರು. ಚಿಕ್ಕಬಳ್ಳಾಪುರ ಉತ್ಸವದ ಕಾರ್ಯಕ್ರಮಗಳ ವಿವರ: ಡಿಸೆಂಬರ್ ೨೧ ರಿಂದ ೨೬ ರವರೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ನೋಂದಣಿ ಆರಂಭವಾಗಲಿದೆ. ಪುರುಷರಿಗೆ ಕ್ರಿಕೆಟ್, ಕಬಡ್ಡಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಹಗ್ಗಜಗ್ಗಾಟ, ಈಜು ಸ್ಪರ್ಧೆಗಳು. ಮಹಿಳೆಯರಿಗೆ ಥ್ರೋಬಾಲ್ ಅಥ್ಲೆಟಿಕ್ಸ್ ಹಾಗೂ ಬ್ಯಾಡ್ಮಿಂಟನ್ ಕ್ರೀಡೆಗಳು. ಸರ್ಕಾರಿ ಉದ್ಯೋಗಿಗಳಿಗೆ, ಜನಪ್ರತಿನಿಧಿಗಳಿಗೆ ಮತ್ತು ಮಾಧ್ಯಮದವರಿಗೆ ಕ್ರಿಕೆಟ್, ಹಗ್ಗಜಗ್ಗಾಟ ಹಾಗೂ ಬ್ಯಾಡ್ಮಿಂಟನ್ ಕ್ರೀಡೆಗಳು. ಸಾಂಸ್ಕೃತಿಕ ಸ್ಪರ್ಧೆಗಳು ಲೈಟ್ ಮ್ಯೂಸಿಕ್, ಡ್ಯಾನ್ಸ್ ಸ್ಪರ್ಧೆ, ಫ್ಯಾಷನ್ ಶೋ ಗಳನ್ನು ಏರ್ಪಡಿಸಲಾಗುತ್ತದೆ ಎಂದರು.
ಜನವರಿ ೭ ರಂದು ಗಣ್ಯರಿಂದ “ಚಿಕ್ಕಬಳ್ಳಾಪುರ ಉತ್ಸವ”ಕ್ಕೆ ಚಾಲನೆ ನೀಡಲಾಗುತ್ತದೆ. ಜೊತೆಗೆ ಫಲಪುಷ್ಪ ಪ್ರದರ್ಶನ, ದೀಪಾಲಂಕಾರ, ಸರ್ಕಾರದ ಸಾಧನೆಗಳ ಪ್ರದರ್ಶನ, ಗ್ರಾಹಕ ವಸ್ತು ಪ್ರದರ್ಶನ, ಆಹಾರ ಮೇಳ, ಸಕಾಲ ಮೇಳ, ಚಿತ್ರ ಸಂತೆ ಹಾಗೂ ಈಜು ಸ್ಪರ್ಧೆಗಳಿಗೆ ಉದ್ಘಾಟನೆ ನೆರವೇರಿ ಸಲಾಗುವುದು. ಅಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಹೆಸರಾಂತ ಹಾಸ್ಯ ಕಲಾವಿದರಿಂದ ಕಾಮಿಡಿ ಶೋ, ಪ್ರಸಿದ್ಧ ಕಲಾವಿದರಿಂದ ನೃತ್ಯ ಪ್ರದರ್ಶನ, ಹೆಸರಾಂತ ಗಾಯಕರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಜನವರಿ ೮ ರಂದು ಅಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಜೊತೆಗೆ ಸಂಜೆ ಕಾರ್ಯಕ್ರಮದಲ್ಲಿ ಹೆಸರಾಂತ ಹಾಸ್ಯ ಕಲಾವಿದರಿಂದ ಕಾಮಿಡಿ ಶೋ, ಪ್ರಸಿದ್ದ ಕಲಾವಿದರಿಂದ ನೃತ್ಯ ಪ್ರದರ್ಶನ, ಹೆಸರಾಂತ ಗಾಯಕರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.
ಜನವರಿ ೯ ರಂದು ಅಥ್ಲೆಟಿಕ್ಸ್ ನಲ್ಲಿ ಅರ್ಹತಾ ಸುತ್ತು ಜರುಗಲಿವೆ. ಜೊತೆಗೆ ಸಂಜೆ ಹೆಸರಾಂತ ಹಾಸ್ಯ ಕಲಾವಿದರಿಂದ ಕಾಮಿಡಿ ಶೋ, ಪ್ರಸಿದ್ಧ ಕಲಾವಿದರಿಂದ ನೃತ್ಯ ಪ್ರದರ್ಶನ, ಹೆಸರಾಂತ ಗಾಯಕರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಜನವರಿ ೧೦ ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟದ ಫೈನಲ್ಸ್ ನಡೆಯಲಿವೆ. ಸಂಜೆ ಕುಸ್ತಿ ಪ್ರದರ್ಶನ, ಕಾಮಿಡಿ ಶೋ, ನೃತ್ಯ ಪ್ರದರ್ಶನ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ಜನವರಿ ೧೧ ರಂದು ಕೋವಿಡ್ ಸೋಂಕಿನಿಂದ ತಡೆಯಾಗಿದ್ದ “ಊರ ಹಬ್ಬ”ವನ್ನು ಮರಳಿ ಆಚರಿಸಲಾಗುತ್ತದೆ. ಇದಕ್ಕೆ ಪ್ರತಿಯೊಬ್ಬರು ಸಹಕರಿಸಿ ಸಂತೋಷದಿಂದ ಆಚರಿಸಬೇಕು ಎಂದು ಸಾರ್ವಜನಿಕರಲ್ಲಿ ಕೋರಿದರು. ಜೊತೆಗೆ ವೇದಿಕೆಯಲ್ಲಿ ಸಂಜೆ ಕಾಮಿಡಿ ಶೋ, ನೃತ್ಯ ಪ್ರದರ್ಶನ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಜನವರಿ ೧೨ ರಂದು ಯುವ ಉತ್ಸವವನ್ನು ಆಯೋಜಿಸಲಾಗಿದೆ. ಇದರಲ್ಲಿ ಜನಪ್ರತಿನಿಧಿಗಳಿಂದ ಯುವ ಸಂವಾದ ನಡೆಸಲಾಗುತ್ತದೆ. ಜೊತೆಗೆ ಚರ್ಚಾಸ್ಪರ್ಧೆ, ಚಿತ್ರಕಲಾ/ಪೇಂಟಿಂಗ್ ಸ್ಪರ್ಧೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕಿರುಚಿತ್ರ ನಿರ್ಮಾಣ ಸ್ಪರ್ಧೆಗಳು ಜರುಗಲಿವೆ. ಸ್ಪರ್ಧಾತ್ಮಕ ಪರೀಕ್ಷಾ ಸೆಮಿನಾರ್, ಉದ್ಯೋಗ ಮೇಳ, ಕೆರಿಯರ್ ಕೌನ್ಸಿಲಿಂಗ್, ರಕ್ತದಾನ ಶಿಬಿರಗಳು ನಡೆಯಲಿವೆ. ಜೊತೆಗೆ ಕ್ರೀಡೋತ್ಸವದ ಎಲ್ಲ ಸ್ಪರ್ಧೆಗಳ ಫೈನಲ್ಸ್ ಕ್ರಿಕೆಟ್, ಥ್ರೋಬಾಲ್, ಕಬಡ್ಡಿ, ಅಥ್ಲೆಟಿಕ್ಸ್ ಬ್ಯಾಡ್ಮಿಂಟನ್, ಹಗ್ಗಜಗ್ಗಾಟ ನಂದಿ ಬೆಟ್ಟ ಹತ್ತುವ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಮುಖ್ಯವಾಗಿ ಖ್ಯಾತ ಕಲಾವಿದ ಜೂನಿಯರ್ ಎನ್.ಟಿ.ಆರ್ ಅವರು ಈ ಉತ್ಸವಕ್ಕೆ ಆಗಮಿಸಲಿದ್ದು ವಿಶೇಷ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು. ಜನವರಿ ೧೩ ರಂದು ಕಲಾ ಸಂಭ್ರಮವನ್ನು ಆಚರಿಸಲಾಗುತ್ತದೆ. ಕಲಾ ಪ್ರದರ್ಶನ, ನೃತ್ಯ ಪ್ರದರ್ಶನ, ಫ್ಯಾಷನ್ ಶೋ ಸ್ಪರ್ಧೆಗಳು ಜರುಗಲಿವೆ. ಅಂದು ಸಂಜೆ ವಿಶೇಷವಾಗಿ ಟಾಲಿವುಡ್ ನೈಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಟಾಲಿವುಡ್ ನಟ ನಟಿಯರು ಆಗಮಿಸಿ ನೃತ್ಯ, ಸಂಗೀತ ಗಾಯನ ನಡೆಸಿಕೊಡುತ್ತಾರೆ ಎಂದರು.
ಜನವರಿ ೧೪ ರಂದು ಸಂಕ್ರಾಂತಿ ಸುಗ್ಗಿ, ರಂಗೋಲಿ ಸ್ಪರ್ಧೆ, ಗಾಳಿಪಟ ಹಾರಾಟ ಸ್ಪರ್ಧೆ, ಎತ್ತಿನ ಬಂಡಿ ಹಾಗೂ ಹಸು ಅಲಂಕಾರ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಅಂದು ಸಂಜೆ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆ, ಜೊತೆಗೆ ಕರ್ನಾಟಕದ ಸ್ಯಾಂಡಲ್ ವುಡ್ ನ ಖ್ಯಾತ ನಟ-ನಟಿಯರು ಸ್ಯಾಂಡಲ್ ವುಡ್ ನೈಟ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈ ಉತ್ಸವಕ್ಕೆ ನಾಡಿನ ಹಾಗೂ ಜಿಲ್ಲೆಯ ಪ್ರತಿಯೊಬ್ಬರು ಆಗಮಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಸಾರ್ವಜನಿಕರಲ್ಲಿ ಕೋರಿದರು.
ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರಾದ ಕೆ.ವಿ.ನಾಗರಾಜ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ವಿ.ನವೀನ್ ಕಿರಣ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಕಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಸಚಿವರ ಇಂದಿನ ಕಾರ್ಯಕ್ರಮಗಳು: ಪತ್ರಿಕಾಗೋಷ್ಠಿ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಮೊದಲು ಚಿಕ್ಕಬಳ್ಳಾಪುರ ಜಿಲ್ಲೆಯ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಸತಿ ರಹಿತರ ಆಯ್ಕೆ ಸಂಬಂಧ ಏರ್ಪಡಿಸಿರುವ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿದರು.
ನಂತರ ಮಂಡಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಒಟ್ಟು ೬೮ ಹಕ್ಕುಪತ್ರಗಳ ವಿತರಣೆ ಮಾಡಿ ಹಾಗೂ ಆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಸತಿ ರಹಿತರ ಆಯ್ಕೆ ಸಂಬಂಧ ಏರ್ಪಡಿಸಿರುವ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿದರು.
ಅಲ್ಲಿಂದ ಅಡ್ ಗಲ್ಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಸತಿ ರಹಿತರ ಆಯ್ಕೆ ಸಂಬಂಧ ಏರ್ಪಡಿಸಿರುವ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿದರು. ಕೊನೆಗೆ ಅರೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಸತಿ ರಹಿತರ ಆಯ್ಕೆ ಸಂಬಂಧ ಏರ್ಪಡಿಸಿರುವ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿದರು.
ಜ.7 ರಿಂದ 14 ವರೆಗೆ ಚಿಕ್ಕಬಳ್ಳಾಪುರ ಉತ್ಸವ: ಕ್ರೀಡೆ, ಕಲೆಗಳ ರಂಗು ರಂಗಿನ ಕಲರವ
RELATED ARTICLES