Friday, June 2, 2023
Homeರಾಜ್ಯಕೆ.ಆರ್.ಪೇಟೆದುಶ್ಚಟ ಮುಕ್ತ ಸಮಾಜದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ...

ದುಶ್ಚಟ ಮುಕ್ತ ಸಮಾಜದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣ ತಿಲಕ್ ಅಭಿಪ್ರಾಯ

ಕೆ.ಆರ್.ಪೇಟೆ: ದುಶ್ಚಟ ಮುಕ್ತ ಸಮಾಜದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಅಭಿಪ್ರಾಯಪಟ್ಟರು. ಅವರು ತಾಲೂಕಿನ ಸೋಮನಹಳ್ಳಿ ಗ್ರಾಮದ ಸರಸ್ವತಮ್ಮ ಪುಟ್ಟೇಗೌಡ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿರುವ ೧೬೨೮ ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. ಇನಿಯವು ಮೊದಲೋಳ್ ನಂಜಿನ ಪನಿ ಎನ್ನುವ ಪಂಪ ಮಹಾಕವಿಯ ಮಾತಿನಂತೆ ಪ್ರತಿಯೊಂದು ಚಟಗಳು ಆರಂಭದಲ್ಲಿ ನಮಗೆ ಹಿತವೆನಿಸುತ್ತವೆ. ಅನಂತರ ಅವು ನಮ್ಮ ಬದುಕನ್ನು ವಿನಾಶದ ಕಡೆಗೆ ತಳ್ಳುತ್ತವೆ. ಕೌಟುಂಬಿಕ ಒತ್ತಡಗಳು, ಹದಿಹರೆಯದ ಆಕರ್ಷಣೆಗಳು, ದುರ್ಜನರ ಸಂಘ, ಸ್ನೇಹ ವಲಯದಲ್ಲಿನ ಒತ್ತಡಗಳು, ಆಧುನಿಕ ಜೀವನಶೈಲಿ, ಆರ್ಥಿಕ ಸ್ವಾತ್ಯಂತ್ರ, ಪ್ರೀತಿಯ ಕೊರತೆ, ಪಾಶ್ಚಾತ್ಯ ಶೈಲಿಯ ಅನುಕರಣೆ ಮತ್ತು ನಕಾರಾತ್ಮಕ ಚಿಂತನೆಗಳು ವ್ಯಕ್ತಿಯೊಬ್ಬನನ್ನು ದುಶ್ಚಟಗಳ ಕಡೆಗೆ ಕರೆದುಕೊಂಡು ಹೋಗುತ್ತವೆ. ವ್ಯಸನಕ್ಕೆ ಒಳಗಾದ ವ್ಯಕ್ತಿ ಮಾನಿಸಿಕ ಮತ್ತು ದೈಹಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಾನೆ. ದುಶ್ಚಟ ಹೊಂದಿದ ವ್ಯಕ್ತಿಯ ಜೊತೆಗೆ ಆತನ ಕುಟುಂಬಗಳೂ ಸಾಮಾಜಿಕ ಗೌರವವನ್ನು ಕಳೆದುಕೊಳ್ಳುವುದರ ಜೊತೆಗೆ ಆರ್ಥಿಕ ಸಂಕಷ್ಠಕ್ಕೆ ಸಿಲುಕುತ್ತವೆ. ಕುಡಿತಕ್ಕಾಗಿ ಸಾಲ, ವಂಚನೆ, ಕಳ್ಳತನ, ಕೊಲೆ ಮುಂತಾದ ಹೀನ ಕೃತ್ಯಗಳಿಗೆ ವ್ಯಕ್ತಿ ಮುಂದಾಗುತ್ತಾನೆ. ಕೌಟುಂಬಿಕ ಜವಾಬ್ದಾರಿಯಿಂದ ದೂರ ಉಳಿಯುವ ಮೂಲಕ ತನ್ನ ಗುಣ, ನಡತೆ, ಸ್ವಭಾವ ಮತ್ತು ಆಲೋಚನೆಗಳನ್ನು ಬದಲಿಸಿಕೊಂಡು ಕುಟುಂಬ ಮತ್ತು ಸಮಾಜಕ್ಕೆ ಹೊರೆಯಾಗುತ್ತಾನೆಂದ ಹರಿಚರಣತಿಲಕ್ ಮಾದಕ ವಸ್ತುಗಳ ಮಾಯಾಜಾಲಕ್ಕೆ ಸಿಲುಕುವ ಮುನ್ನವೇ ಎಚ್ಚರಿಕೆ ವಹಿಸಬೇಕು. ಮದ್ಯವರ್ಜನ ಶಿಬಿರದ ಪ್ರಯೋಜನ ಪಡೆದು ಚಟ ಮುಕ್ತರಾದವರನ್ನು ಪ್ರೀತಿಯಿಂದ ನಡೆಸಿಕೊಳ್ಳುವ ಮೂಲಕ ವ್ಯಸನ ಮುಕ್ತ ವ್ಯಕ್ತಿ ಮತ್ತೆ ವ್ಯಸನಗಳ ಕಡೆಗೆ ಸಾಗದಂತೆ ಕುಟುಂಬದ ಸದಸ್ಯರು ಎಚ್ಚರಿಕೆ ವಹಿಸಬೇಕೆಂದು ತಿಲಕ್ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್ ಮಾತನಾಡಿ ಶಿಬಿರದ ಪ್ರಯೋಜನ ಪಡೆದು ಚಟ ಮುಕ್ತರಾದವರು ಮತ್ತೆ ಚಟಗಳಿಗೆ ಒಳಗಾಗದೆ ಸಮಾಜಕ್ಕೆ ಮಾದರಿಯಾಗಿ ನಿಲ್ಲಬೇಕು. ಚುನಾವಣೆಗಳು ಹತ್ತಿರ ಬರುತ್ತಿವೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ಪಡೆಯುವ ಆಸೆಯಿಂದ ಕೆಲವರು ಯುವಕರನ್ನು ಕುಡಿತದ ಕಡೆಗೆ ತಳ್ಳುತ್ತಾರೆ. ಅಧಿಕಾರಕ್ಕಾಗಿ ನಿಮಗೆ ಚಟ ಕಲಿಸಿದವನು ಅಧಿಕಾರ ಪಡೆದು ಸುಖಿಯಾಗುತ್ತಾನೆ. ಅವನು ಕೊಟ್ಟ ಪುಡಿಗಾಸಿನಿಂದ ಚಟ ಕಲಿತವರು ತಮ್ಮ ಬದುಕನ್ನು ಕಳೆದುಕೊಳ್ಳುತ್ತಾರೆ. ಆದರ ಕಾರಣ ಶಿಬಿರದ ಪ್ರಯೋಜನ ಪಡೆದು ಚಟ ಮುಕ್ತರಾದವರು ಮದ್ಯಪಾನದ ಅಪಾಯದ ಬಗ್ಗೆ ಸಮಾಜವನ್ನು ಜಾಗೃತಗೊಳಿಸಬೇಕು. ಹಣಕೊಟ್ಟು ಯುವ ಸಮೂಹವನ್ನು ಹಾಳುಮಾಡುವವರ ವಿರುದ್ದ ಎಚ್ಚರ ವಹಿಸಬೇಕು. ತಮ್ಮ ತಮ್ಮ ಗ್ರಾಮಗಳಲ್ಲಿ ಮತಕ್ಕಾಗಿ ಹಣ, ಹೆಂಡ ಹಂಚುವವರ ವಿರುದ್ದ ಸಮರ ಸಾರಬೇಕೆಂದರು. ನಿವೃತ್ತ ಶಿಕ್ಷಕ ಚಂದ್ರೇಗೌಡ, ಗ್ರಾಮ ಮುಖಂಡರಾದ ಮಲ್ಲೇಗೌಡ, ಮಾಲಿಂಗೇಗೌಡ, ಅಕ್ಕಿಹೆಬ್ಬಾಳು ಉದಯಕುಮಾರ್, ಆಸರೆ ಸೇವಾ ಸಮಾಜದ ಹೆಚ್.ಬಿ.ಮಂಜುನಾಥ್ ಮತ್ತಿತರರಿದ್ದರು.

RELATED ARTICLES
- Advertisment -
Google search engine

Most Popular

Recent Comments