ಮಂಡ್ಯ: ಮಗುವನ್ನು ತಾಯಿಯ ಗರ್ಭದಿಂದ ಸಂರಕ್ಷಿಸಿ ಉತ್ತಮ ಜೀವನ ಕಟ್ಟಿ ಕೊಡುವ ಜವಾಬ್ದಾರಿ ಎಲ್ಲಾ ನಾಗರೀಕರ ಮೇಲಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾಲೋಚನೆ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಸಮಾಜದಲ್ಲಿ ಮಗುವಿನ ಜೀವ, ಜೀವನ ಎರಡು ಪ್ರಮುಖ ಪತ್ರ ವಹಿಸುತ್ತದೆ. ಇದಕ್ಕೆ ತೊಂದರೆಯಾದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ಶಾಲೆಯಿಂದ ಹೊರಗುಳಿದಿರುವ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ, ಅವರಿಗೆ ಇರುವ ಸಮಸ್ಯಗಳ ಬಗ್ಗೆ ಚರ್ಚಿಸಿ ಪೋಷಕರ ಮನಪರಿವರ್ತಿಸಿ ಅವರನ್ನು ಶಾಲೆಗೆ ದಾಖಲಿಸುವ ಕೆಲಸ ನಿರ್ವಹಿಸಿ. ನೈತಿಕ ಶಿಕ್ಷಣಕ್ಕೆ ಶಾಲೆಯಲ್ಲಿ ಹೆಚ್ಚಿನ ಆದ್ಯತೆ ನೀಡಿ ಎಂದರು.
ಹೆಣ್ಣು ಮಕ್ಕಳ ಹಾಸ್ಟಲ್ ಹಾಗೂ ವಸತಿ ಶಾಲೆಗಳಲ್ಲಿ ಮಹಿಳಾ ವಾರ್ಡ್ನ್‌ಗಳನ್ನು ನಿಯೋಜಿಸಿ, ಕೇವಲ ದಾಖೆಗಳ ನಿರ್ವಹಣೆ ವಾರ್ಡ್ನಗಳ ಕೆಲಸವಾಗಬಾರದು. ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ತಿಳಿಸಿ. ಅಧಿಕಾರಿಗಳು ಹಾಸ್ಟೆಲ್ ಹಾಗೂ ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದರು. ಬಾಲ್ಯ ವಿವಾಹ ಎಂದರೆ ಜೈಲಿಗೆ ಕಳುಹಿಸುವ ಕಾರ್ಯಕ್ರಮ ಎಂದು ಎಲ್ಲರಿಗೂ ತಿಳಿಸಿ, ಬಾಲ್ಯವಿವಾಹ ಮಾಡಿಸುವ ಪೋಷಕರು, ಪುರೋಹಿತರು, ಕಲ್ಯಾಣ ಮಂಟಪ ನೀಡುವವರು, ಭಾಗವಹಿಸುವವರು ಎಲ್ಲರಿಗೂ ಶಿಕ್ಷೆ ಇದೆ. ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದರೆ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಿ ಎಂದರು.
ಜನವರಿ ೧ ಹೊಸ ವಷದ ಶುಭಾರಂಭ ಎಂದು ಮೋಜಿಗಾಗಿ ೧೮ ವಷಕ್ಕಿಂತ ಕೆಳಗಿನವರು ಸಹ ಮದ್ಯ ಸೇವನೆ ಮಾಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಹಾಸ್ಟಲ್ ವಾರ್ಡ್ನ್ ಗಳು ಹೆಚ್ಚಿನ ನಿಗಾ ವಹಿಸಿ.
ಅಬಕಾರಿ ಇಲಾಖೆಯವರು ಮದ್ಯ ಮಾರಾಟ ಮಾಡುವವರಿಗೆ ೧೮ ವಷಕ್ಕಿಂತ ಕೆಳಗಿನವರಿಗೆ ಮದ್ಯ ಮಾರಾಟ ಮಾಡುವುದು ಕಂಡು ಬಂದರೆ ಪರವಾನಗಿ ರದ್ದು ಪಡಿಸಿ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಳಿನಿ ಕುಮಾರಿ ಅವರು ಮಾತನಾಡಿ ಮಕ್ಕಳು ಭಯ ಹಾಗೂ ಹಿಂಸಾತ್ಮಕ ವಾತಾವರಣದಲ್ಲಿ ಬೆಳೆದರೆ, ಮಕ್ಕಳಲ್ಲಿ ಇರುವ ಕ್ರಿಯಾಶೀಲತೆ ಕುಗ್ಗಿ ಹೋಗುತ್ತದೆ. ಮಕ್ಕಳ ಉತ್ತಮ ಬೆಳವಣಿಗೆಗೆ ಹಲವಾರು ಕಾನೂನುಗಳಿಗೆ, ಅವುಗಳ ಬಗ್ಗೆ ಜಿಲ್ಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಮಕ್ಕಳನ್ನು ರಕ್ಷಿಸ ಬೇಕಿರುವ ಶಿಕ್ಷಕರು, ವಾರ್ಡ್ನ್, ಅಧಿಕಾರಿಗಳಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಮಕ್ಕಳ ರಕ್ಷಣೆ ಹೇಗೆ ಎಂಬ ಪ್ರಶ್ನೆ ಹುಟ್ಟುತ್ತದೆ. ಲೈಂಗಿಕ ದೌರ್ಜನ್ಯ ಶಿಕ್ಷಾರ್ಹ ಅಪರಾಧ ಎಂದು ತಿಳಿದಿದ್ದರೂ ಅಪರಾಧ ಮಾಡುತ್ತಾರೆ ಎಂದರೆ ಅವರಿಗೆ ಶಿಕ್ಷೆಯ ತೀವ್ರತೆಯ ಬಗ್ಗೆ ಅರಿವು ಇಲ್ಲವೇ ಎಂಬ ಸಂದೇಹ ಸಹ ಮೂಡುತ್ತದೆ. ಪೊಸ್ಕೋ ಕಾಯ್ದೆ ಸೇರಿದಂತೆ ಮಕ್ಕಳಿಗೆ ಇರುವ ಕಾನೂನಿನ ಬಗ್ಗೆ ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಅವರು ಮಾತನಾಡಿ ನರೇಗಾ ಯೋಜನೆಯಡಿ ಸ್ಥಳಾವಕಾಶ ಇರುವ ಶಾಲೆಗಳಲ್ಲಿ ಆಟದ ಮೈದಾನ ನಿರ್ಮಾಣ ಮಾಡಲಾಗುತ್ತಿದೆ. ಸಮಾಜಿಕ ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಪೌಷ್ಠಿಕತೆ ಆಹಾರ ಒದಗಿಸುವ ಗಿಡಗಳನ್ನು ನೆಡಲಾಗುತ್ತಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜ್ ಅವರು ಮಾತನಾಡಿ ಮಕ್ಕಳ ಹಕ್ಕುಗಳ ಕುರಿತು ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ, ಈ ಕುರಿತಂತೆ ಪ್ರತಿ ಮಾಹೆ ನಡೆಯುವ ಕಂದಾಯಾಧಿಕಾರಿಗಳ ಸಭೆಯಲ್ಲಿ ಪರಿಶೀಲಿಸಲಾಗುವುದು.
ವಸತಿ ಶಾಲೆಗಳಲ್ಲಿ ಉನ್ನತ ಅಧಿಕಾರಿಗಳಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಿ, ಇದರಿಂದ ಮಕ್ಕಳಿಗೆ ಪ್ರೇರಣೆ ಸಿಗುತ್ತದೆ ಹಾಗೂ ಮಕ್ಕಳಿಗೆ ಅವರ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಇರುವ ಕಾನೂನುಗಳ ಬಗ್ಗೆ ಅರಿವು ಸಹ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ: ಧನಂಜಯ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜು, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ವಿಜಯ ಪ್ರಕಾಶ್, ಸಿ.ಡಿ.ಪಿ.ಒ ಕುಮಾರ ಸ್ವಾಮಿ ಮಕ್ಕಳ ಸಹಾಯವಾಣಿಯ ನಿರ್ದೇಶಕರಾದ ವೆಂಕಟೇಶ್, ಮಹೇಶ್ ಚಂದ್ರ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ: ಕೆ ನಾಗಣ್ಣಗೌಡ
RELATED ARTICLES