ಬೆಂಗಳೂರು: ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ನಟ ಶಿವರಾಜ್ ಕುಮಾರ್ ವಿನಂತಿಸಿದ್ದಾರೆ.
ಭಾನುವಾರ ಕ್ರಾಂತಿ ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ನಟಿ ರಚಿತಾ ರಾಮ್ ಮಾತನಾಡುವಾಗ ಅವರ ಬಳಿ ನಿಂತಿದ್ದ ನಟ ದರ್ಶನ್ ಮೇಲೆ ಜನರ ನಡುವಿನಿಂದ ವ್ಯಕ್ತಿಯೊಬ್ಬರು ಶೂ ಎಸೆದಿದ್ದರು.
ನಟರಾದ ಪ್ರೇಮ್, ಶರಣ್, ಲೂಸ್ ಮಾದ ಯೋಗಿ, ಅಭಿಷೇಕ್ ಅಂಬರೀಶ, ಪ್ರಜ್ವಲ್ ದೇವರಾಜ್ ಸೇರಿದಂತೆ ಸಾಕಷ್ಟು ನಟ ನಟಿಯರು ಈ ಘಟನೆಯನ್ನು ಖಂಡಿಸಿದ್ದರು.
‘ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ. ಅಭಿಮಾನದಿಂದ ಪ್ರೀತಿಯನ್ನು ತೋರಿ; ದ್ವೇಷ ಅಗೌರವವನ್ನಲ್ಲ‘ ಎಂದು ನಟ ಶಿವರಾಜ್‌ಕುಮಾರ್ ಟ್ವೀಟ್ ಮಾಡಿದ್ದಾರೆ.