ಬೆಳಗಾವಿ: ‘ಸರ್ಕಾರ ಯೋಜನೆಗಳನ್ನು ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಮುಟ್ಟಿಸಲು ಗ್ರಾಮ ಪಂಚಾಯಿತಿ ನೌಕರರು ಶ್ರಮ ಪಡುತ್ತಾರೆ. ಆದರೆ, ಅವರಿಗೇ ಸಂಬಳ, ಸೇವಾಭದ್ರತೆ ಇಲ್ಲದೇ ಪರದಾಡುವಂತಾಗಿದೆ’ ಎಂದು ಕರ್ನಾಟಕ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ದೇವಿಪ್ರಸಾದ ಬೊಲ್ಮ ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಅನುಮೋದನೆ ಆಗದಿದ್ದರೂ ಗ್ರಾ.ಪಂ ನೌಕರರಿಗೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು. ಸದರಿ ನಿವೃತ್ತಿ ಉಪಧನ ಪಾವತಿಸಲು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಸರ್ಕಾರವೇ ಶಾಶ್ವತ ನಿಧಿ ಕಾಯ್ದಿರಿಬೇಕು ಎಂದೂ ಅವರು ಒತ್ತಾಯಿಸಿದರು.
ಮುಖಂಡರಾದ ಪದ್ಮನಾಭ ಕುಲಾಲ್, ಪ್ರಶಾಂತ ತಿಂಕನಳ್ಳಿ, ಹೇಮಂತ ನಂದಳಕೆ, ನಯನಾ ಮೂಡುಬಿದರೆ, ಗಂಗಾಧರ ನಾಯಕ, ನಾರಾಯಣ ಚಿಕ್ಕಮಂಗಳೂರು, ಚಂದ್ರಶೇಕರ ಕಡೂರು, ಯೋಗಿಶ್ ನಾಯಕ, ಪ್ರಶಾಂತ ತೆಂಕನಾಡಿ ಇತರರು ನೇತೃತ್ವ ವಹಸಿದ್ದರು.
*
ಸಾರಿಗೆ ನೌಕರರ ಧರಣಿ:
ಬೆಳಗಾವಿ: ‘ಸಾರಿಗೆ ನೌಕರರಿಗೆ ನಿವೃತ್ತಿ ನಂತರದ ಗ್ರ್ಯಾಚುಟಿ ಹಣ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಾರಿಗೆ ಸಂಸ್ಥೆ ನೌಕರರ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಮಹಾ ಮಂಡಳದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸುವರ್ಣ ವಿಧಾನಸೌಧ ಎದುರಿನ ಬಸ್ತವಾಡದಲ್ಲಿ ಧರಣಿ ನಡೆಸಿ ಮಾತನಾಡಿದ ಅವರು, ‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನೌಕರರಿಗೆ ಮಾಸಿಕ ₹10,000 ಪಿಂಚಣಿ ನೀಡುವುದಾಗಿ ಭರವಸೆ ನೀಡಿದ್ದರು. ಸರ್ಕಾರ ಈ ಕುರಿತು ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಐದು ವರ್ಷಗಳಿಂದ ಸಮವಸ್ತ್ರ ಮತ್ತು ಹೊಲಿಗೆ ವೆಚ್ಚ ನೀಡಿಲ್ಲ. ಆದರೆ, ಸಮವಸ್ತ್ರ ಧರಿಸಿಲ್ಲ ಎಂದು ₹5,000 ದಂಡ ವಿಧಿಸುತ್ತಾರೆ ಎಂದೂ ದೂರಿದರು.
ಮಹಾಮಂಡಳದ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ ಬಿದರಕುಂದಿ, ಅಧ್ಯಕ್ಷ ಆರ್.ಪಿ.ಕೋಪರ್ಡೆ, ಬಿ.ಎಲ್.ಮಂಟೂರ, ಆರ್.ಆರ್.ಬೆಳಗಲ್ಲ, ಮಹೇಶ ಶೀಗಿಹಳ್ಳಿ, ಎಸ್.ಎಸ್.ಮಹಾಜನ ಸೇರಿದಂತೆ ಮುಂತಾದವರು ಇದ್ದರು.
*
‘ಕೃಷಿ ಜಮೀನಿನಲ್ಲಿ ಕಂಪನಿ ದರ್ಬಾರ್ ನಿಲ್ಲಿಸಿ’
ಬೆಳಗಾವಿ: ‘ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ಕೇಂದ್ರ ಹಿಂದಕ್ಕೆ ಪಡೆದಿದೆ. ಆದರೆ, ರಾಜ್ಯ ಸರ್ಕಾರ ಹಿಂಬಾಗಿಲಿನಿಂದ ಇವುಗಳನ್ನೇ ಜಾರಿ ಮಾಡುತ್ತಿದೆ. ಭೂ ಸುಧಾರಣಾ ಕಾಯ್ದೆಯ ಮೂಲಕ ರೈತರನ್ನು ಒಕ್ಕಲೆಬ್ಬಿಸುತ್ತಿದೆ. ಕೃಷಿ ಜಮೀನಿನಲ್ಲಿ ಕಂಪನಿಗಳ ದರ್ಬಾರ್ ನಿಲ್ಲಿಸಿ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಸಿದರು.
ಸುವರ್ಣ ವಿಧಾನಸೌಧ ಎದುರಿನ ಕೊಂಡಸಕೊಪ್ಪ ಬಳಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣ, ಬಂದರು, ರೈಲು ನಿಲ್ದಾಣಗಳು, ಸೇವಾ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲಾಗಿದೆ. ಈಗ ಭೂ ಸುಧಾರಣಾ ಕಾಯ್ದೆ ಮೂಲಕ ಹೊಲಗಳಿಗೆ ಕಂಪನಿಗಳನ್ನು ನುಗ್ಗಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ರೈತರು ಹೊಲ ಕಳೆದುಕೊಂಡು ನಗರಗಳಿಗೆ ವಲಸೆ ಹೋಗುತ್ತಾರೆ. ಜಮೀನ್ದಾರರ ಮನೆಗಳಲ್ಲಿ ಸೇವೆ ಮಾಡುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದೂ ಅವರು ಆಕ್ರೋಶ ಹೊರಹಾಕಿದರು.
ಕಬ್ಬಿಗೆ ಎಸ್‌ಎಪಿ ನೀಡಬೇಕು, ಬೆಂಬಲ ಬೆಲೆಯನ್ನು ಕಾಯಂ ಮಾಡಲು ಕಾನೂನು ರಕ್ಷಣೆ ನೀಡಬೇಕು. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಅಸ್ತಿತ್ವ ತೆಗೆದು ಕೃಷಿ ಇಲಾಖೆಯಲ್ಲಿ ಸೇರಿಸಿರುವುದನ್ನು ವಾಪಸ್ ಪಡೆಯಬೇಕು. ಕುಲಾಂತರಿ ಸಾಸಿವೆ ಬಿತ್ತನೆಗೆ ಅನುಮತಿ ನೀಡಬಾರದು. ರೈತರ ಸಾಲ ಮನ್ನಾ ಮಾಡಬೇಕು ಎಂದೂ ಆಗ್ರಹಿಸಿದರು.
ಮುಖಂಡರಾದ ವೆಂಕಟನಾರಾಯಣಪ್ಪ, ಆನೆಕೆರೆ ರವಿ, ಕೆಂಕೆರೆ ಸತೀಶ್, ಎನ್.ಕೆ.ಮಂಜುನಾಥಗೌಡ, ಕೆಂಚೇಗೌಡ, ರೆಡ್ಡಿಹಳ್ಳಿ ವೀರಣ್ಣ, ಎನ್.ಎ. ನಾಗರಾಜ, ಭಕ್ತರಹಳ್ಳಿ ಬೈರೇಗೌಡ, ಮಹಾದೇವಿ ಬೇವಿನಮಠದ, ಜೆ.ಕಾರ್ತಿಕ್, ಬಸವಂತ ಇತರರು ನೇತೃತ್ವ ವಹಿಸಿದ್ದರು.
ಸಂಜೆಗೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ರೈತರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿದ ಮನವಿ ಆಲಿಸಿದರು