Tuesday, June 6, 2023
Homeಸುದ್ದಿಡಿಸೆಂಬರ್ 23- 24-25 ರಂದು ‘ವೆಂಕಟೇಶ ನಾಟ್ಯಮಂದಿರ’ದ ‘ರಸಸಂಜೆ’

ಡಿಸೆಂಬರ್ 23- 24-25 ರಂದು ‘ವೆಂಕಟೇಶ ನಾಟ್ಯಮಂದಿರ’ದ ‘ರಸಸಂಜೆ’

ಬೆಂಗಳೂರಿನ ಖ್ಯಾತ ‘ವೆಂಕಟೇಶ ನಾಟ್ಯ ಮಂದಿರ’ ನೃತ್ಯ ಸಂಸ್ಥೆಯ ಸುಪ್ರಸಿದ್ಧ ಅಂತರರಾಷ್ಟ್ರೀಯ ಹಿರಿಯ ನಾಟ್ಯಗುರು ಕರ್ನಾಟಕ ಕಲಾಶ್ರೀ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಪುರಸ್ಕೃತೆ, ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪಡೆದಿರುವ ಶ್ರೀಮತಿ ರಾಧಾ ಶ್ರೀಧರ್ ಜಗತ್ಪ್ರಸಿದ್ಧರು. ನಾಟ್ಯಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ-ಅನುಪಮ. ಜೊತೆಗೆ ಅವರ ಸರಳ-ಸೌಮ್ಯ ವ್ಯಕ್ತಿತ್ವ, ಬದ್ಧತೆಯ ಮನೋಭಾವ, ಶಿಷ್ಯರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ನಿರ್ವ್ಯಾಜ ಅಂತಃಕರಣದ ಮನೋಭಾವ ಅನುಕರಣೀಯ.
ಒಂದು ನಾಟ್ಯ ಸಂಸ್ಥೆ ಐವತ್ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಕ್ರಮಿಸುವುದು ಸಣ್ಣ ಸಾಧನೆಯೇನಲ್ಲ. ಈ ಕೀರ್ತಿ ಬೆಂಗಳೂರಿನ ಸುಪ್ರಸಿದ್ಧ ಈ ‘ವೆಂಕಟೇಶ ನಾಟ್ಯ ಮಂದಿರ’ಕ್ಕೆ ಸಲ್ಲಬೇಕು. ಇಡೀ ವಿಶ್ವದಾದ್ಯಂತ ನಾಟ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಪ್ರತಿಭಾನ್ವಿತ ನೃತ್ಯಗುರುಗಳು- ಕಲಾವಿದರನ್ನು ರೂಪಿಸಿರುವುದು ಇದರ ಅಗ್ಗಳಿಕೆ. ನಾಲ್ಕು ತಲೆಮಾರುಗಳಿಗೆ ವಿದ್ಯಾಧಾರೆಯೆರೆಯುತ್ತ, ಇಂದೂ ಚಟುವಟಿಕೆಯ ಚಿಲುಮೆಯಾಗಿ ಕ್ರಿಯಾಶೀಲರಾಗಿರುವುದು ರಾಧಾ ಶ್ರೀಧರ್ ಅವರ ವೈಶಿಷ್ಟ್ಯ.
ಜಗತ್ತಿನಾದ್ಯಂತ ಸಾವಿರಾರು ನೃತ್ಯಪ್ರದರ್ಶನಗಳನ್ನು ಯಶಸ್ವಿಯಾಗಿ ಪ್ರಸ್ತುತಪಡಿಸಿ, ಕಲಾರಸಿಕರಲ್ಲದೆ, ಮಾಧ್ಯಮ ವರ್ಗದಿಂದಲೂ ಅಪಾರ ಪ್ರಶಂಸೆ ಪಡೆದಿರುವುದು ಇವರ ಹೆಮ್ಮೆ. ವಿಶ್ವದ ಗಮನ ಸೆಳೆದ ಇವರ ನೃತ್ಯಸಂಯೋಜನೆಯ ‘ದಿ ನೆಕ್ಟರ್ ಅಂಡ್ ದಿ ಸ್ಟೋನ್’ ಸಾಕ್ಷ್ಯಚಿತ್ರ ಯುಗೊಸ್ಲೋವಿಯಾದ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡದ್ದು ನೃತ್ಯ ಇತಿಹಾಸದಲ್ಲಿ ಒಂದು ದೊಡ್ಡ ದಾಖಲೆ.
ಕಳೆದ ಮೂರು ದಶಕಗಳಿಂದ ಸತತವಾಗಿ, ದೇಶ-ವಿದೇಶದ ಉದಯೋನ್ಮುಖ ಮತ್ತು ಪ್ರತಿಷ್ಟಿತ ನೃತ್ಯಕಲಾವಿದರಿಗೆ ವೇದಿಕೆಯನ್ನುಒದಗಿಸಿ, ಅವರ ಪ್ರತಿಭಾ ಪ್ರಕಾಶಕ್ಕೆ ಉತ್ತೇಜನ ನೀಡುತ್ತ ಬಂದಿರುವ ಸಂಸ್ಥೆಯ ‘’ರಸಸಂಜೆ’’ ಒಂದು ಪ್ರತಿಷ್ಠಿತ ‘ನೃತ್ಯೋತ್ಸವ’ವಾಗಿ ಗುರುತಿಸಲ್ಪಟ್ಟಿದೆ.
ಮೂರುದಿನಗಳ ಕಾಲ ನಡೆಯುವ ಈ ನೃತ್ಯಶಾಲೆಯ ‘’ರಸಸಂಜೆ’’ ವೈವಿಧ್ಯಪೂರ್ಣ ಕಾರ್ಯಕ್ರಮಗಳು ಕಲಾರಸಿಕರ ಕಣ್ಮನಗಳಿಗೆ ಹಬ್ಬವಾಗಿ ರಸಧಾರೆಯ ನೃತ್ಯವಲ್ಲರಿಯಾಗಿ ಕಂಗೊಳಿಸಲಿದೆ. ಒಂದೇ ವೇದಿಕೆಯ ಮೇಲೆ ಅಪೂರ್ವ ಕಲಾಕೋವಿದರ ಸಮ್ಮಿಲನ.
ಡಿಸೆಂಬರ್ 23 ರಿಂದ 25 ನೆಯ ತಾ.ನವರೆಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ಈ ಬಾರಿಯೂ ಮೂರುದಿನಗಳ ‘ರಸಸಂಜೆ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಶುಭಾರಂಭದ ದಿನ 23 ಶುಕ್ರವಾರ ಸಂಜೆ 6.30 ಗಂಟೆಗೆ – ಹಿರಿಯ ಗುರು ಗಾಯತ್ರಿ ಕೇಶವನ್ ಮತ್ತು ಅವರ ಶಿಷ್ಯರಿಂದ ಭರತನಾಟ್ಯ ಪ್ರಸ್ತುತಿ. ಅನಂತರ ಉದಯೋನ್ಮುಖ ಕಲಾವಿದ ಶಶಾಂಕ್ ಕಿರಣ್ ನಾಯರ್ ಅವರಿಂದ ಭರತನಾಟ್ಯದ ಏಕವ್ಯಕ್ತಿ ನೃತ್ಯ ಪ್ರದರ್ಶನ. ಮುಖ್ಯ ಅತಿಥಿ- ಅನನ್ಯ-ಡಾ. ರಾಘವೇಂದ್ರ
ಎರಡನೆಯ ದಿನ- 24 ಡಿಸೆಂಬರ್ ಶನಿವಾರ ಸಂಜೆ 6 ಗಂಟೆಗೆ ಗುರು ರಾಧಾ ಶ್ರೀಧರರ ವೆಂಕಟೇಶ ನಾಟ್ಯಮಂದಿರದ ಶಿಷ್ಯರಿಂದ ಭರತನಾಟ್ಯ ಪ್ರದರ್ಶನ.
ಅನಂತರ- ಭುವನ ಪ್ರಸಾದ್ ಮತ್ತು ಪದ್ಮಿನಿ ರವಿ ಅವರಿಂದ ಭರತನಾಟ್ಯದ ಏಕವ್ಯಕ್ತಿ ನೃತ್ಯ ಪ್ರದರ್ಶನಗಳು . ಮುಖ್ಯ ಅತಿಥಿ-ಡಾ. ಸೂರ್ಯಪ್ರಸಾದ್.
ಮೂರನೆಯ ದಿನ- 25 ಡಿಸೆಂಬರ್ ಭಾನುವಾರ ಸಂಜೆ 5.30 ಗಂಟೆಗೆ ಚೆನ್ನೈನ ಕು. ಸಮೀಕ್ಷಾ ಮನುಕುಮಾರ್ ಮತ್ತು ಕು. ಪೂಜಾ ಸುಗಮ್ ಅವರಿಂದ ಯುಗಳ ಭರತನಾಟ್ಯ ಪ್ರದರ್ಶನ. ಆನಂತರ- ನಂದಿನಿ ಅಜ್ಜಂಪುರ್ ಮತ್ತು ಸುಜಯ್ ಶಾನಭಾಗ್ ಅವರಿಂದ ಭರತನಾಟ್ಯದ ಏಕವ್ಯಕ್ತಿ ನೃತ್ಯ ಪ್ರದರ್ಶನಗಳು . ಮುಖ್ಯ ಅತಿಥಿಗಳು-ಗುರು ಡಾ. ವಸುಂಧರಾ ದೊರೆಸ್ವಾಮಿ ಮತ್ತು ಗುರು ವೈಜಯಂತಿ ಕಾಶಿ.
ಕಲಾನೈಪುಣ್ಯದ ಈ ಸುಮನೋಹರ ನೃತ್ಯಗಳನ್ನು ಕಣ್ತುಂಬಿಕೊಳ್ಳಲು ಸರ್ವರಿಗೂ ಸುಸ್ವಾಗತ.

ವೈ.ಕೆ.ಸಂಧ್ಯಾ ಶರ್ಮ

RELATED ARTICLES
- Advertisment -
Google search engine

Most Popular

Recent Comments