ವಾಷಿಂಗ್ಟನ್: 21 ವರ್ಷಗಳ ಬಳಿಕ ಭಾರತದ ಮಹಿಳೆಯಗೆ ಮಿಸೆಸ್ ವರ್ಲ್ಡ್ ಕಿರೀಟ ಲಭಿಸಿದೆ. ಭಾರತವನ್ನು ಪ್ರತಿನಿಧಿಸಿ, 63 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಸರ್ಗಮ್ ಕೌಶಲ್ ಮಿಸೆಸ್ ವರ್ಲ್ಡ್ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಮಿಸೆಸ್ ಇಂಡಿಯಾ ಸ್ಪರ್ಧೆಯ ವ್ಯವಸ್ಥಾಪಕ ಸಂಸ್ಥೆ, ದೀರ್ಘ ಕಾಯುವಿಕೆ ಇದೀಗ ಮುಗಿದಿದೆ. 21 ವರ್ಷಗಳ ಬಳಿಕ ನಾವು ಕಿರೀಟವನ್ನು ಮರಳಿ ಪಡೆದಿದ್ದೇವೆ ಎಂದು ತಿಳಿಸಿದೆ.
ಸರ್ಗಮ್ ಕೌಶಲ್ ಯಾರು?
ಜಮ್ಮು ಮತ್ತು ಕಾಶ್ಮೀರ ಮೂಲದ ಸರ್ಗಮ್ ಕೌಶಲ್ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಈ ಹಿಂದೆ ಸರ್ಗಮ್ ವಿಜಾಗ್‌ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ತಮ್ಮ ಪತಿ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.
ಮಿಸೆಸ್ ವರ್ಲ್ಡ್ ಕಿರೀಟವನ್ನು ತೊಟ್ಟಿರುವ ಸರ್ಗಮ್, ನಾವು 21 ವರ್ಷಗಳ ಬಳಿಕ ಕಿರೀಟವನ್ನು ಮರಳಿ ಪಡೆದಿದ್ದೇವೆ. ನಾನು ತುಂಬಾ ಉತ್ಸುಕಳಾಗಿದ್ದೇನೆ. ಲವ್ ಯು ಇಂಡಿಯಾ, ಲವ್ ಯು ವರ್ಲ್ಡ್ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಏನಿದು ಮಿಸೆಸ್ ವರ್ಲ್ಡ್ ಸ್ಪರ್ಧೆ?
ಮಿಸೆಸ್ ವರ್ಲ್ಡ್ ವಿವಾಹಿತ ಮಹಿಳೆಯರ ಸೌಂದರ್ಯ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯನ್ನು 1984 ರಲ್ಲಿ ಅಮೆರಿಕದಲ್ಲಿ ಪ್ರಾರಂಭಿಸಲಾಯಿತು. ಆರಂಭದಲ್ಲಿ ಈ ಸ್ಪರ್ಧೆಯನ್ನು ಮಿಸೆಸ್ ವುಮನ್ ಆಫ್ ದಿ ವರ್ಲ್ಡ್ ಎಂದು ಹೆಸರಿಸಲಾಗಿತ್ತು. ಬಳಿಕ 1988 ರಲ್ಲಿ ಮಿಸೆಸ್ ವರ್ಲ್ಡ್ ಎಂದು ಕರೆಯಲ್ಪಟ್ಟಿತು. ಮಿಸೆಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆಗೆ 80 ಕ್ಕೂ ಹೆಚ್ಚು ದೇಶಗಳು ಸ್ಪರ್ಧಿಸಿವೆ. ಅಮೆರಿಕ ಹೆಚ್ಚು ಸಂಖ್ಯೆಯ ವಿಜೇತರನ್ನು ಹೊಂದಿದೆ.
2001 ರಲ್ಲಿ ಡಾ. ಅದಿತಿ ಗೋವಿತ್ರಿಕರ್ ಅಸ್ಕರ್ ಮಿಸೆಸ್ ವರ್ಲ್ಡ್ ಕಿರೀಟವನ್ನು ಪಡೆದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. ಇದಾದ 21 ವರ್ಷಗಳ ಬಳಿಕ ಇದೀಗ ಮಿಸೆಸ್ ವರ್ಲ್ಡ್-2022 ರ ಕಿರೀಟ ಸರ್ಗಮ್ ಕೌಶಲ್‌ರದ್ದಾಗಿದೆ.