ಪಾಂಡವಪುರ (ಮಂಡ್ಯ): ‘ಭಯೋತ್ಪಾದಕರ ಬಗ್ಗೆ ಅನುಕಂಪ ವ್ಯಕ್ತಪಡಿಸುವ, ಅವರಿಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ಮುಖಂಡರಿಗೆ ಜೈಲು ಶಾಶ್ವತವಾದ ನೆಲೆಯಾಗಲಿದೆ. ದೇಶದ ವಿರುದ್ಧವಾಗಿ ಮಾತನಾಡುವವರಿಗೆ ಕಾನೂನು ವ್ಯವಸ್ಥೆ ತಕ್ಕ ಪಾಠ ಕಲಿಸಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.
‘ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ತಮ್ಮ ನಿಲುವು ಸ್ಪಷ್ಪಪಡಿಸಬೇಕು. ದೇಶದ ಪರವಾಗಿದ್ದಾರೋ, ಭಯೋತ್ಪಾದಕರ ಪರವಾಗಿದ್ದಾರೋ ಎಂಬುದನ್ನು ಜನರಿಗೆ ತಿಳಿಸಬೇಕು. ದೇಶದ ಸುರಕ್ಷತೆ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗುವುದು ನಿಶ್ಚಿತ’ ಎಂದರು.
‘ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪಿನಿಂದಾಗಿ ಭಾರತದ ಭೂಮಿ ಚೀನಾ ಪಾಲಾಯಿತು. ಈಗ ಒಂದಿಂಚೂ ಜಾಗ ಚೀನಾ ಪಾಲಾಗದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರ ವಹಿಸಿದ್ದಾರೆ. ಚೀನಾ ಹಾಗೂ ನಮ್ಮ ಸೈನಿಕರ ನಡುವೆ ಘರ್ಷಣೆ ನಡೆದರೂ ಆ ಬಗ್ಗೆ ಕಾಂಗ್ರೆಸ್ ಮುಖಂಡರು ಹಗುರವಾಗಿ ಮಾತನಾಡುತ್ತಾರೆ. ಚುನಾವಣೆಗಳಲ್ಲಿ ಸೋಲುತ್ತಿರುವ ಕಾಂಗ್ರೆಸ್ ಮುಖಂಡರು ಹತಾಶರಾಗಿ ಮಾತನಾಡುತ್ತಿದ್ದಾರೆ’ ಎಂದರು.
ಟಿಪ್ಪು ಡ್ರಾಪ್‌ಗೆ ಹಾಕ್ತಾರೆ: ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ‘ಮಾತೆತ್ತಿದ್ದರೆ ಸಿದ್ದರಾಮಯ್ಯ ಧರ್ಮಾಂಧ ಟಿಪ್ಪುವನ್ನು ಹುಲಿ ಎನ್ನುತ್ತಾರೆ. ಅಲ್ಪಸಂಖ್ಯಾತರ ವೋಟಿಗಾಗಿ ಹಿಂದೂ ಸಮಾಜವನ್ನು ತೆಗಳುತ್ತಾರೆ. ಹೀಗೆಯೇ ಮುಂದುವರಿದರೆ ಕಾಂಗ್ರೆಸ್ ಮುಖಂಡರನ್ನು ನಂದಿ ಬೆಟ್ಟದ ಟಿಪ್ಪು ಡ್ರಾಪ್‌ನಲ್ಲಿ ಹಾಕುತ್ತಾರೆ’ ಎಂದು ವ್ಯಂಗ್ಯವಾಡಿದರು.
‘ಒಂದೆರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಉಸಿರಾಡುತ್ತಿದೆ, ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಲು ಸರತಿ ಸಾಲಿನಲ್ಲಿ ನಿಂತಿದ್ದು ಚುನಾವಣೆ ಮುಗಿದರೆ ಕರ್ನಾಟಕ ಕೂಡ ಕಾಂಗ್ರೆಸ್ ಮುಕ್ತವಾಗಲಿದೆ. ಕಾಂಗ್ರೆಸ್ ಸರ್ಕಾರ ಮಾಡದ ಹಲವು ಕೆಲಸಗಳನ್ನು ಬಿಜೆಪಿ ಮಾಡಿದೆ. ವಿಧಾನಸೌಧದ ಎದುರು ಕೆಂಪೇಗೌಡ ಪ್ರತಿಮೆ ನಿರ್ಮಿಸುವುದು ನಮ್ಮ ಸಂಕಲ್ಪವಾಗಿದೆ’ ಎಂದರು.
********
ಸಿ.ಎಂಗೆ ರೈತರಿಂದ ಕಪ್ಪು ಬಟ್ಟೆ ಪ್ರದರ್ಶನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗಾಗಿ ರೈತಸಂಘದ ಸಾವಿರಾರು ರೈತರು ಪಾಂಡವಪುರದ ಶ್ರೀರಂಗಪಟ್ಟಣ ರಸ್ತೆಯಲ್ಲಿ ಸೇರಿದ್ದರು. ಆದರೆ, ಮುಖ್ಯಮಂತ್ರಿಗಳು ರೈತರನ್ನು ಭೇಟಿಯಾಗದೆ ಮುಂದೆ ಸಾಗಿದರು. ಇದರಿಂದ ಕೆರಳಿದ ರೈತರು ಕಪ್ಪು ಬಟ್ಟೆ ಪ್ರದರ್ಶಿಸಿದರು. ಮುಖ್ಯಮಂತ್ರಿ, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.