ನೈರುತ್ಯ ಮುಂಗಾರು ಪ್ರವೇಶ ಈ ವರ್ಷ ಸಾಮಾನ್ಯ ದಿನಕ್ಕಿಂತ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈರುತ್ಯ ಮುಂಗಾರು ಜೂನ್ 4 ರೊಳಗೆ ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಸಾಮಾನ್ಯವಾಗಿ ಜೂನ್ 1 ರಂದು ಮುಂಗಾರು ಕೇರಳವನ್ನು ಪ್ರವೇಶ ಮಾಡುವುದು ಹಿಂದಿನ ವಾಡಿಕೆಯಾಗಿದೆ. ಆದರೆ, ಈ ಬಾರಿ ಮುಂಗಾರು ಪ್ರವೇಶ ನಾಲ್ಕು ದಿನ ಮೊದಲು ಇಲ್ಲವೇ ನಾಲ್ಕು ದಿನ ತಡವಾಗಿ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ. ನೈರುತ್ಯ ಮುಂಗಾರು ಆಗಮನ ಕೇರಳದಿಂದ ಗುರುತಿಸಲ್ಪಡುತ್ತದೆ. ಈ ಹಿಂದೆ ಭೂ ವಿಜ್ಞಾನ ಸಚಿವಾಲಯ ದೇಶದಲ್ಲಿ ಈ ವರ್ಷ ಸಾಮಾನ್ಯ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತು.
ಈ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ 83.5 ಸೆಂಟಿಮೀಟರ್ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಮುಂಗಾರು ಮಾರುತ ಕೇರಳವನ್ನು ಪ್ರವೇಶಿಸಿದ ನಂತರ ದೇಶದ ಇತರ ಭಾಗಗಳಿಗೆ ಪಸರಿಸಲಿದೆ.