ಈ ಪ್ರಪಂಚದಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ದು ಈ ನನ್ನ ತಾಯಿ ತನಗಾಗಿ ಬದುಕುವುದನ್ನೇ ಮರೆಯುವ ತ್ಯಾಗಮಯಿಈ ನನ್ನ ಮುದ್ದು ‘ಅಮ್ಮ’
ಅಮ್ಮನನ್ನು ವರ್ಣಿಸಲು ಪದಗಳುಂಟೆ..? ವರ್ಣಿಸಲು ಹೊರಟರೆ, ಎಲ್ಲ ಭಾಷೆಗಳೇ ಬಡವಿಯಾಗುವುದು. ಲೇಖನ ಕವನ, ಕಥೆ ಇವೆಲ್ಲವುಗಳು ಕೂಡ ತಾಯಿ ಮುಂದೆ ಶೂನ್ಯದಂತೆ ಕಾಣುವುದು.
ನನಗೆ ಸೃಷ್ಟಿಕರ್ತನ ನಿಷ್ಕಲ್ಮಷ ಜೀವಿ ಎಂದರೆ ಅದು ಈ ನನ್ನ ಅಮ್ಮ . ಅವಳು ನನ್ನೊಂದಿಗೆ ಇದ್ದಾಗ ನನ್ನೆದೆಯ ಭಾರವೆಲ್ಲ ಹಗುರಾಯಿತು. ಜೀವನಪೂರ್ತಿ ನಾನೆಂದು ತೊರೆಯರಲಾದ ಬಹುದೊಡ್ಡ ನನ್ನ ಪಾಲಿನ ಮಾಣಿಕ್ಯವೇ ಈ ನನ್ನವ್ವ…
ಹಬ್ಬ ಹರಿದಿನಗಳಲ್ಲಿ ತಾನು ಹಳೆಯ ಸೀರೆಯನ್ನುಟ್ಟು ನಮಗೆ ಹೊಸ ಬಟ್ಟೆ ತೊಡಿಸಿ ಸಂಭ್ರಮಿಸಿದ ಸಂತಸ, ನಮಗೆ ಬಿಸಿರೊಟ್ಟಿ ತಟ್ಟೆ ಅಮ್ಮ ಮಾತ್ರ ತಂಗಳ ರೊಟ್ಟಿ ತಿಂದು, ಯಾವುದೋ ದಿನ ರುಚಿಯಾಗಿ ಮಾಡಿದಾಗ ನಮಗೆ ಬಡಿಸಿ ಮಿಕ್ಕಿದರೆ ತಿನ್ನುವದು ಇಲ್ಲವಾದರೆ ಅನಾರೋಗ್ಯದ ನೆಪ ಹೇಳಿ ಜರಿಯುವದು ಈ ತಾಯಿ. ಹೇಳುತ್ತಾ ಹೋದರೆ ಮುಗಿಯದ ಮಹಾಚರಿತ್ರೆ ಅವಳದ್ದು.
ನನ್ನ ಬದುಕಿಗೆ ಸ್ಪೂರ್ತಿಯಾಗಿ, ಅಕ್ಷರದ ಅನ್ನ ಉಣಬಡಿಸಿದ್ದು ಸಹ ಬಡತನದಲ್ಲಿಯೇ. ನೀವು ಕಳೆದಂತ ನೋವಿನ ದಿನಗಳು ತನಗೆ ಹುಟ್ಟಿದ ಮಕ್ಕಳಿಗೆ ಬರಬಾರದೆಂದು, ಅವಳಿಗಿಂತ ಹೆಚ್ಚಿನ ಸಂತಸದಿಂದ ಕಳೆಯಲು ಅವ್ವ ನೋವುಂಡಿದ್ದು ಅಷ್ಟಿಷ್ಟಲ್ಲ..!
ನಮ್ಮನ್ನು ಸದೃಢ ಮಾಡಲು ತವರಮನೆಯಿಂದ ಆಕಳು ತಂದು ಹಾಲುಣಿಸಿದ್ದ ಮುಕ್ಕೋಟಿ ದೇವಿಯೇ ನನ್ನವ್ವ ಮಹಾದೇವಿ. ತನ್ನ ನಾಲ್ಕು ಮಕ್ಕಳ ಏಳ್ಗೆಗಾಗಿ ಸೆಣೆಸಾಡಿದ್ದು ಅಷ್ಟಿಷ್ಟಲ್ಲ. ಅವಳಿಗೆ ಸಾಟಿಯಾಗಿ ಬದುಕಿನ ಕಷ್ಟಗಳನ್ನು ಬವಣಿಸಿದರಲ್ಲಿ ಅರ್ಧ ಪಾಲು ಅಪ್ಪನದು ಕೂಡಾ… ಶ್ರೀಮಂತರ ಮಕ್ಕಳಂತೆ ನಮ್ಮನ್ನು ಪಟ್ಟಣದಲ್ಲಿ ಓದಿಸಿ ನಮ್ಮ ಭವಿಷ್ಯಕ್ಕೆ ನಾವೇ ಹೊಣೆ ಎನ್ನುವ ಮಟ್ಡಿಗೆ ನಮ್ಮನ್ನು ಪೋಷಿಸಿದ ಕಣ್ಮಣಿಗಳು.
ಇಂದಿಗೂ ತನ್ನ ಕಷ್ಟದ ಮೂಟೆಗಳನ್ನು ಬೆನ್ನಿಗಂಟಿಸಿಕೊಂಡು ತೊಂದರೆಯೇ ಇಲ್ಲದಂತೆ ನಟಿಸುವ ಮಹಾನಟಿ ನಮ್ಮಮ್ಮ. ನಾವು ಹುಟ್ಟಿದ ಮೇಲೆ ತನಗಾಗಿ ಬದುಕುವುದನ್ನೆ ಮರೆತ ಈ ನಮ್ಮ ತಾಯಿ.ಅದೋಂದು ದಿನ ಕೂಡುಕುಟಂಬದಿಂದ ಹೊರಬಂದಾಗ ನೋವನ್ನುಂಡು ಅವಳು ತ್ಯಾಗಿಯಾದ ಆ ದಿನಗಳು ಇಂದಿಗೂ ಕಣ್ಣುಕಟ್ಟಿವೆ.
ಇಂದು ವಿಶ್ವ ಅಮ್ಮಂದಿರ ಆಚರಣೆ ಅದೊಂದು ದಿನವಾಗಿ ಉಳಿಯದೆ ಅಮ್ಮಂದಿರು ಅನಾಥ ಆಶ್ರಮ ಸೇರದಂತೆ ಈ ಜಗತ್ತು ಕಣ್ಮರೆಯಾಗುವ ತನಕ ಅಮ್ಮಂದಿರನ್ನು ಪೂಜಿಸುವ ಪರಂಪರೆಯನ್ನು ಉಳಿಸೋಣ…
ನನ್ನ ಬದುಕಿನ ಸ್ಫೂರ್ತಿ ನನ್ನ ಅಮ್ಮ
ನಿಷ್ಕಲ್ಮಶ ಮನಸ್ಸಿನವಳು
ನಿಷ್ಠುರ ನಿಲುವಿನವಳು
ಸ್ವತಂತ್ರ ಮನೋಭಾವದವಳು
ಸ್ವಾಭಿಮಾನದ ಬದುಕು ಕಟ್ಟಿಕೊಂಡವಳು.
ಮುಗ್ಧ ಮನಸಿನವಳು
ಮುಕ್ತ ಮಾತಿನವಳು
ಸೋಲನ್ನು ಒಪ್ಪಿಕೊಳ್ಳದವಳು
ಶಿಸ್ತನ್ನು ರೂಡಿಸಿಕೊಂಡವಳು.
ಮಾತಿನಲ್ಲಿ ಸೊಲದವಳು
ಮೊಹದಲ್ಲಿ ಸಿಲುಕದವಳು
ವೈಜ್ಞಾನಿಕ ಮನೋಭಾವದವಳು
ಮೂಢನಂಬಿಕೆಯನ್ನು ಹೊಡಿದೋಡಿಸಿದವಳು.
ಕೆಲಸದಲ್ಲಿ ನಿರತಳಾದವಳು
ಕೈಲಾಸ ಕಂಡವಳು.
ನೋವನ್ನು ನುಂಗುವಳು
ನಲಿವನ್ನು ಹಂಚಿಕೊಂಡವಳು
ನಮಗಾಗಿ ಜನಿಸಿದವಳು
ನಮ್ಮಲ್ಲಿ ಒಂದಾದವಳು.
ತನಗಾಗಿ ಏನನ್ನು ಬಯಸದವಳು
ತನಗಿಲ್ಲವೆಂದು ಕೊರಗದವಳು
ಸೋತಾಗ ಸದಾ ನಮ್ಮೆಲ್ಲರ ಜೊತೆ ಇರುವವಳು
ಧೈರ್ಯ ತುಂಬುವವಳು.
ಪತಿ ಮತ್ತು ಮಕ್ಕಳ ಸಂತೋಷದಲ್ಲಿ ತನ್ನ ಖುಷಿಯನ್ನು ಕಾಣುವವಳು ವೃತ್ತಿಯನ್ನು ಪ್ರೀತಿಸಿದಳು
ಪ್ರವೃತ್ತಿಯನ್ನು ರೂಢಿಸಿಕೊಂಡವಳು
ನಮ್ಮಮ್ಮ ನಮ್ಮಮ್ಮ ನಮಗಾಗಿ ತನ್ನ ಇಡೀ ಜೀವನ ಪೂರ್ತಿ ಬದುಕುವಳು.
ಕಾಶಿಬಾಯಿ. ಸಿ. ಗುತ್ತೇದಾರ
ಯುವ ಬರಹಗಾರ್ತಿ ಕಲಬುರಗಿ