Saturday, June 3, 2023
Homeಇದೀಗ ಬಂದ ತಾಜಾ ಸುದ್ದಿಲೆಫ್ಟಿನೆಂಟ್ ಗವರ್ನರ್‌ ಮೂಲಕ ದೆಹಲಿ ಸರ್ಕಾರಕ್ಕೆ ಮೂಗುದಾರ ಹಾಕುವ ಕೇಂದ್ರದ ಪ್ರಯತ್ನಗಳಿಗೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ

ಲೆಫ್ಟಿನೆಂಟ್ ಗವರ್ನರ್‌ ಮೂಲಕ ದೆಹಲಿ ಸರ್ಕಾರಕ್ಕೆ ಮೂಗುದಾರ ಹಾಕುವ ಕೇಂದ್ರದ ಪ್ರಯತ್ನಗಳಿಗೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ

ಕೇಂದ್ರದಿಂದ ನೇಮಕವಾಗುವ ಲೆಫ್ಟಿನೆಂಟ್ ಗವರ್ನರ್‌ಗೆ ಖಡಕ್ ಸೂಚನೆಗಳನ್ನು ನೀಡಿರುವ ಸರ್ವೋಚ್ಚ ನ್ಯಾಯಾಲಯ, “ದೆಹಲಿ ಸರ್ಕಾರವು ಸೇವೆಗಳ ಮೇಲೆ ನಿಯಂತ್ರಣ ಹೊಂದಿರಬೇಕು, ಲೆಫ್ಟಿನೆಂಟ್ ಗವರ್ನರ್ ಸರ್ಕಾರದ ನಿಯಂತ್ರಣಕ್ಕೆ ಬದ್ಧರಾಗಿರಬೇಕು” ಎಂದು ನಿರ್ದೇಶಿಸಿದೆ.

ಎಎಪಿ ಮತ್ತು ಕೇಂದ್ರ ಸರ್ಕಾರದ ನಡುವೆ ಅಧಿಕಾರದ ತಿಕ್ಕಾಟ ನಡೆಯುತ್ತಿರುವಾಗ ಈ ತೀರ್ಪು ಹೊರಬಿದ್ದಿದೆ. “ಜನರ ಇಚ್ಛೆಯನ್ನು ಪ್ರತಿನಿಧಿಸಿ ಕಾನೂನು ರೂಪಿಸುವ ಅಧಿಕಾರವನ್ನು ದೆಹಲಿ ವಿಧಾನಸಭೆಗೆ ನೀಡಲಾಗಿದೆ” ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಸರ್ವಾನುಮತದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

“ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತದ ನಿಜವಾದ ಅಧಿಕಾರವು ಚುನಾಯಿತ ಸರ್ಕಾರದ ತೋಳಿನ ಮೇಲೆ ನಿಂತಿರಬೇಕು” ಎಂದು ಪೀಠವು ಅಭಿಪ್ರಾಯಪಟ್ಟಿದೆ. ಕೇಂದ್ರ ಮತ್ತು ರಾಜ್ಯಗಳೆರಡೂ ಸೇರಿ ಕಾನೂನು ರಚಿಸಬಹುದಾದ ವಿಷಯಗಳಲ್ಲಿ ಕೇಂದ್ರ ಸರ್ಕಾರವು ದೆಹಲಿ ಚುನಾಯಿತ ಸರ್ಕಾರದೊಂದಿಗೆ ಚರ್ಚಿಸಬಹುದು. ‘ಸದರಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಮೀರಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲಷ್ಟೇ ಇದು ಸೀಮಿತವಾಗಿರುತ್ತದೆ’ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಆಡಳಿತ ಸೇವೆಗಳ ಮೇಲೆ ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಒಪ್ಪದ ನ್ಯಾಯಾಧೀಶರು, “ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್ ಮತ್ತು ಭೂಮಿ ವಿಷಯಗಳನ್ನಷ್ಟೇ ಅದರ (ದೆಹಲಿ) ಅಧಿಕಾರ ವ್ಯಾಪ್ತಿಯಿಂದ ಹೊರಗಿಡಲಾಗಿದೆ” ಎಂದು ಕೋರ್ಟ್ ಹೇಳಿದೆ.

“ಅಧಿಕಾರಿಗಳು ಮಂತ್ರಿಗಳಿಗೆ ವರದಿ ಮಾಡುವುದನ್ನು ನಿಲ್ಲಿಸಿದರೆ ಅಥವಾ ಅವರ ನಿರ್ದೇಶನಗಳನ್ನು ಪಾಲಿಸದಿದ್ದರೆ, ಸಾಮೂಹಿಕ ಜವಾಬ್ದಾರಿಯ ತತ್ವದಲ್ಲಿ ಪರಿಣಾಮ ಕಂಡುಬರುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಆದೇಶಿಸಿದ್ದಾರೆ.

ರಾಷ್ಟ್ರದ ರಾಜಧಾನಿಯಲ್ಲಿ ಅಧಿಕಾರಶಾಹಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಯಾರು ಹೊಂದಿದ್ದಾರೆ ಎಂಬ ಪ್ರಶ್ನೆ ಕೋರ್ಟ್ ಮುಂದಿತ್ತು. ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಈ ಪ್ರಕರಣವನ್ನು ಆಲಿಸಿತು.

ದೆಹಲಿ ಸರ್ಕಾರದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್ ಗವರ್ನರ್, ಆಡಳಿತ ಸೇವೆಗಳ ವಿಚಾರದಲ್ಲಿ ಚುನಾಯಿತ ಸರ್ಕಾರದ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಮಂತ್ರಿಮಂಡಲದ ಸಹಾಯ ಮತ್ತು ಸಲಹೆಗೂ ಲೆಫ್ಟಿನೆಂಟ್ ಗವರ್ನರ್ ಬದ್ಧರಾಗಿರುತ್ತಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಲೆಫ್ಟಿನೆಂಟ್ ಗವರ್ನರ್ ಅಧಿಕಾರವನ್ನು ಹೊಂದಿದ್ದರೂ, ಅವರು ಇಡೀ ದೆಹಲಿ ಸರ್ಕಾರದ ಮೇಲೆ ಅಧಿಕಾರವನ್ನು ಹೊಂದಿದ್ದಾರೆಂದು ಅರ್ಥವಲ್ಲ. ಹಾಗೇನಾದರೂ ಇದ್ದಿದ್ದರೆ ದೆಹಲಿಯಲ್ಲಿ ಪ್ರತ್ಯೇಕ ಚುನಾಯಿತ ಸರ್ಕಾರವನ್ನು ಹೊಂದುವ ಉದ್ದೇಶಕ್ಕೆ ಅರ್ಥವಿಲ್ಲದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

“ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವು ತನ್ನ ಅಧಿಕಾರಿಗಳನ್ನು ನಿಯಂತ್ರಿಸುವ ಅಧಿಕಾರವನ್ನು ಹೊಂದಿಲ್ಲದಿದ್ದರೆ, ಶಾಸಕಾಂಗ ಮತ್ತು ಸಾರ್ವಜನಿಕರ ಮೇಲಿನ ಅದರ ಜವಾಬ್ದಾರಿಯನ್ನು ದುರ್ಬಲಗೊಳಿಸಿದಂತಾಗುತ್ತದೆ. ಒಬ್ಬ ಅಧಿಕಾರಿ ಸರ್ಕಾರಕ್ಕೆ ಸ್ಪಂದಿಸದಿದ್ದರೆ, ಸಾಮೂಹಿಕ ಜವಾಬ್ದಾರಿ ದುರ್ಬಲಗೊಳ್ಳುತ್ತದೆ” ಎಂದು ಆತಂಕ ವ್ಯಕ್ತಪಡಿಸಿದೆ.

ದೆಹಲಿಯ ಆಡಳಿತಾರೂಢ ಎಎಪಿ 2013ರಿಂದಲೂ ಇಲ್ಲಿ ಅಧಿಕಾರದಲ್ಲಿದೆ. ಆದರೆ ವಿವಿಧ ಲೆಫ್ಟಿನೆಂಟ್ ಗವರ್ನರ್‌ಗಳೊಂದಿಗೆ ವರ್ಷಗಳ ಕಾಲ ಅದು ಗುದ್ದಾಟವನ್ನು ನಡೆಸುತ್ತಲೇ ಬರಲಾಗಿದೆ.

“ಇದು ದೆಹಲಿಗೆ ದೊರೆತ ಐತಿಹಾಸಿಕ ಗೆಲುವಾಗಿದೆ. ನಾವು ಎಂಟು ವರ್ಷಗಳಿಂದ ಹೋರಾಡುತ್ತಿದ್ದೇವೆ. ಅವರು (ಕೇಂದ್ರ) ಉದ್ದೇಶಪೂರ್ವಕವಾಗಿ ತಮ್ಮ ನೇಮಕಗಳನ್ನು ಬಳಸಿಕೊಂಡು ನಮ್ಮ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿದರು. ನನ್ನ ಎರಡೂ ಕೈಗಳನ್ನು ಕಟ್ಟಿ ನದಿಗೆ ತಳ್ಳಲಾಯಿತು, ಆದರೆ ದೇವರ ಕೃಪೆಯಿಂದ ನಾನು ಈಜಾಡುತ್ತಿದ್ದೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.

ಶೀಘ್ರದಲ್ಲಿಯೇ ಭ್ರಷ್ಟ ಅಧಿಕಾರಿಗಳನ್ನು ತೆಗೆದು ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. “ನಮ್ಮ ಕೆಲಸವು ಈಗ 10 ಪಟ್ಟು ವೇಗದಲ್ಲಿ ಪುನರಾರಂಭಗೊಳ್ಳುತ್ತದೆ” ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments