ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ಭರ್ಜರಿ ಮತದಾನ ನಡೆಯುತ್ತಿದೆ. ಮೈಸೂರು ಜಿಲ್ಲೆಯಲ್ಲಿಯೂ ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಅದೇ ರೀತಿ ಮೈಸೂರು ಒಡೆಯರ್ ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಕೂಡ ಹಕ್ಕು ಚಲಾಯಿಸಲು ಮತಗಟ್ಟೆಗೆ ತೆರಳಿದ್ದರು. ಆದರೆ, ಅವರಿಗೆ ಮತದಾನ ಮಾಡಲು ಮತಗಟ್ಟೆ ಸಿಬ್ಬಂದಿ ಅವಕಾಶ ನಿರಾಕರಿಸಿದ್ದಾರೆ.
ಬಳಿಕ ಮೂಲ ಐಡಿ ಕಾರ್ಡ್ ಅನ್ನು ತರಿಸಿದ್ದಾರೆ. ಅಷ್ಟರವರೆಗೂ ಕಾರಿನಲ್ಲಿಯೇ ಪ್ರಮೋದಾ ದೇವಿ ಕುಳಿತಿದ್ದರು. ಮೂಲ ಗುರುತಿನಿ ಚೀಟಿ ಒದಗಿಸಿದ ಬಳಿಕ ಮತದಾನಕ್ಕೆ ಅವಕಾಶ ನೀಡಲಾಗಿದೆ. ಆ ನಂತರ ರಾಜಮಾತೆ ಪ್ರಮೋದಾ ದೇವಿ ಮತ ಚಲಾಯಿಸಿದ್ದಾರೆ.
ಇನ್ನು, ಮತದಾನದ ಬಳಿಕ ಮಾತನಾಡಿದ ಪ್ರಮೋದಾ ದೇವಿ ಅವರು, ಮೊದಲೆಲ್ಲಾ ಪಕ್ಷದಿಂದ ಚೀಟಿ ಕೊಡುತ್ತಿದ್ದರು. ಈ ಬಾರಿ ಆಫೀಸ್‌ನಿಂದ ಚೀಟಿ ಕೊಟ್ಟಿದ್ದಾರೆ. ಅದರಲ್ಲಿ ಎಲ್ಲಾ ಮಾಹಿತಿ ಇದೆ. ಅದರ ಭರವಸೆ ಮೇಲೆ ಬೇರೆ ಚೀಟಿ ಕೊಡಲ್ಲ ಅಂತ ಬಂದಿದ್ದೆ. ಆದು ಸಾಲಲ್ಲ, ಬೇರೆ ದಾಖಲೆ ಬೇಕು ಎಂದು ಸಿಬ್ಬಂದಿ ಹೇಳಿದರು. ಆಫೀಸ್‌ನಿಂದ ಬಂದ ಚೀಟಿಯಿಂದಾಗಿ ಬೇರೆ ದಾಖಲೆ ತಂದಿರಲಿಲ್ಲ. ಹಾಗಾಗಿ ಮತದಾನ ತಡ ಆಯ್ತು ಎಂದು ಹೇಳಿದರು.
ರಾಜ್ಯಾದ್ಯಂತ ಬಿರುಸಿನ ಮತದಾನ!
ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು, ಮತಗಟ್ಟೆಗೆ ಬಂದು ಜನ ಮತ ಚಲಾಯಿಸುತ್ತಿದ್ದಾರೆ. ಮೇ 13ರಂದು ಚುನಾವಣಾ ಫಲಿತಾಂಶ ಬರಲಿದೆ. ಬೆಳಗ್ಗೆ 11 ಗಂಟೆ ಹೊತ್ತಿಗೆ ರಾಜ್ಯಾದ್ಯಂತ ಶೇ.20.94ರಷ್ಟು ಮತದಾನ ಆಗಿತ್ತು.