Tuesday, June 6, 2023
Homeಇದೀಗ ಬಂದ ತಾಜಾ ಸುದ್ದಿಈ ಮತದಾನ ಪವಿತ್ರವೇಕೇ

ಈ ಮತದಾನ ಪವಿತ್ರವೇಕೇ

ಹಸಿದವನಿಗೆ ಗೊತ್ತು ಅನ್ನದ ಮಹತ್ವ ಎನ್ನುವಂತೆ ಬ್ರಿಟಿಷರ ಕಪಿಮುಷ್ಟಿಯಿಂದ ಭಾರತ ಸ್ವತಂತ್ರಗೊಂಡಾಗ ಮತದಾನದ ಮಹತ್ವ ಏನೆಂದು ನಮಗೆ ತಿಳಿಯಿತು. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬ್ರಿಟಿಷರು ಭಾರತೀಯರಾದ ನಮಗೆ ಮತದಾನದ ಹಕ್ಕನ್ನೇ ಕೊಟ್ಟಿರಲಿಲ್ಲ. ಹೀಗಾಗಿ ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡುವ ಹಕ್ಕು ಪ್ರಜೆಗಳಾದ ಸ್ವತ: ನಮಗೆ ಇರಲಿಲ್ಲ.

ಹಾಗಾದರೆ ಮತದಾನ ಮಾಡುವ ಹಕ್ಕು ಬೆಳೆದು ಬಂದ ರೀತಿಯನ್ನು ಅವಲೋಕಿಸೋಣ:

1901 ರ ಮಾರ್ಲಿಮಿಂಟೋ ಸುಧಾರಣೆಗಳು:

ಕೆಲವೇ ಕೆಲವು ವಿಶೇಷ ವ್ಯಕ್ತಿಗಳಿಗೆ ಮಾತ್ರ ಮತದಾನದ ಹಕ್ಕನ್ನು ಪ್ರತಿನಿಧಿಗಳ ಆಯ್ಕೆಯಲ್ಲಿ ಕೊಡಲಾಯಿತು.

1919 ರ ಭಾರತ ಸರ್ಕಾರದ ಕಾಯ್ದೆ :
ಈ ಕಾಯ್ದೆಯ ಅನ್ವಯ ಮೇಲ್ಮನೆ, ಕೆಳಮನೆಗಳ ಮಾದರಿಯನ್ನು ಜಾರಿಗೆ ತರಲಾಯಿತು. ಈ ಸಂದರ್ಭದಲ್ಲಿ ಮತದಾನದ ಹಕ್ಕನ್ನು ಕೆಲವು ಮಾನದಂಡಗಳ ಆಧಾರದ ಮೇಲೆ ಅಂದರೆ ಆಸ್ತಿ, ಮಾಲಿಕತ್ವ, ಭೂಮಿಯ ಹಿಡುವಳಿ, ಆದಾಯ ತೆರಿಗೆ ಪಾವತಿಸುವಿಕೆ, ವಿದ್ಯಾಭ್ಯಾಸದ ಅರ್ಹತೆ, ಲಿಂಗ ಮುಂತಾದವುಗಳ ಆಧಾರದ ಮೇಲೆ ಕೊಡಲಾಗಿತ್ತು.

ಈ ಬದಲಾವಣೆಗಳಿಂದ ಆಸ್ತಿವಂತರು, ಶ್ರೀಮಂತರು ಮಾತ್ರ ರಾಜಕೀಯ ಅಧಿಕಾರವನ್ನು ತಮ್ಮಲ್ಲಿ ಕೇಂದ್ರೀಕರಿಸಿಕೊಂಡು ಆಡಳಿತವನ್ನು ನಿಯಂತ್ರಿಸುವ ಮಟ್ಟಿಗೆ ತಲುಪಿದರು. ಸಾಮಾನ್ಯ ಪ್ರಜೆ ಆಡಳಿತದಲ್ಲಿ ಅನಾಥನಾಗಿದ್ದ.

ಮಹಿಳಾ ಮತದಾನದ ಹಕ್ಕಂತೂ ತುಂಬಾ ಸೀಮಿತವಾಗಿತ್ತು. ಮದುವೆಯಾಗಿರಬೇಕು, ಆಸ್ತಿ ಹೊಂದಿರಬೇಕು, ವಿದ್ಯಾಭ್ಯಾಸದ ಅರ್ಹತೆ ಹೀಗೆ ಅನೇಕ ಅಡೆತಡೆಗಳನ್ನು, ಮಾನದಂಡಗಳನ್ನು ದಾಟಿಕೊಂಡು ಅರ್ಹತೆ ಹೊಂದಿದರೆ ಮಾತ್ರ ಮತದಾನದ ಹಕ್ಕು ಮಹಿಳೆಗೆ ದೊರೆಯುತ್ತಿತ್ತು.

ನೀವು ನಂಬಿ ಬಿಡಿ 1951ಕ್ಕಿಂತ ಮುಂಚೆ ಇಡೀ ಭಾರತದ ಅಂದಿನ ಮಹಿಳಾ ಜನಸಂಖ್ಯೆಯ ಪ್ರತಿಶತ 2.5 ರಷ್ಟು ಮಾತ್ರ ಮಹಿಳೆಯರು ಮತದಾನ ಮಾಡುವುದಕ್ಕೆ ಅರ್ಹರಾಗಿದ್ದರು. ಇದು ವಿಪರ್ಯಾಸವೇ ಸರಿ.

ಶ್ರೀಮಂತಿಕೆ, ಆಸ್ತಿ, ಅಂತಸ್ತು, ಮೇಲ್ಜಾತಿ, ಲಿಂಗ ಹೀಗೆ ನಾನಾ ಕಾರಣಗಳ ಆಧಾರದ ಮೇಲೆ ಮಾತ್ರ, ಮತದಾನದ ಹಕ್ಕನ್ನು ನೀಡುತ್ತಿದ್ದ ಗುಲಾಮಿ ಸ್ಥಿತಿ ನಮ್ಮದಾಗಿತ್ತು. ಹೀಗಿರುವಾಗ 1947ರಲ್ಲಿ ನಮ್ಮ ಸಂಸತ್ತು ಸಾರ್ವತ್ರಿಕ ಮತದಾನಕ್ಕೆ ತಾತ್ವಿಕ ಒಪ್ಪಿಗೆಯನ್ನು ಕೊಟ್ಟಿತು.

ಸ್ವತಂತ್ರ ನಂತರ ಭಾರತ ಸಂವಿಧಾನದ Article – 326 ರ ಪ್ರಕಾರ 18 ಅಥವಾ 18 ವಯಸ್ಸಿನ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯೂ ತನ್ನ ಜಾತಿ, ಮತ, ಪಂಥ, ಆಸ್ತಿ, ಅಂತಸ್ತು, ಲಿಂಗ, ಧರ್ಮ, ಬಣ್ಣ, ವಿದ್ಯಾರ್ಹತೆ, ಆರ್ಥಿಕ ಸ್ಥಿತಿಗಳ ಮಾನದಂಡವಿಲ್ಲದೆ ವಿವೇಚನಾಯುಕ್ತ ಮನಸ್ಸಿನಿಂದ ಮತದಾನ ಮಾಡುವ ಹಕ್ಕನ್ನು ಸಾಂವಿಧಾನಿಕವಾಗಿ ಪಡೆದಿರುತ್ತಾನೆ. ಇದನ್ನೇ ಸಾರ್ವತ್ರಿಕ ಮತದಾನದ ಹಕ್ಕು ಎನ್ನುತ್ತೇವೆ. ( Universal Adult Franchise).

ಇಷ್ಟೊಂದು ಕಷ್ಟಪಟ್ಟು ಪಡೆದಿರುವ ಮತದಾನದ ಹಕ್ಕನ್ನು ನಾವು ಜವಾಬ್ದಾರಿಯಿಂದ ಚಲಾಯಿಸದಿದ್ದರೆ, ಸ್ವಾತಂತ್ರ್ಯ ಪೂರ್ವ ಮತದಾನದ ಹಕ್ಕು ವಂಚಿತ, ನಮ್ಮ ಪೂರ್ವಜರ ತ್ಯಾಗ ಬಲಿದಾನಗಳಿಗೆ ಅವಮಾನ ಮಾಡಿದಂತೆ ಅಲ್ಲವೇ!

ನಮ್ಮದು ಪ್ರತಿನಿಧಿ ಪ್ರಜಾಪ್ರಭುತ್ವ. (Representative Democracy). ಈ ಪ್ರತಿನಿಧಿ ಪ್ರಜಾಪ್ರಭುತ್ವದ ತಳಹದಿಯೇ ಈ ಸಾರ್ವತ್ರಿಕ ಮತದಾನದ ಹಕ್ಕಾಗಿದೆ.

ಭಾರತದ ಪವಿತ್ರ ಸಂವಿಧಾನದ ಪ್ರಮುಖ ಗುಣಲಕ್ಷಣಗಳಲ್ಲೊಂದಾದ ಸಾರ್ವತ್ರಿಕ ಮತದಾನದ ಹಕ್ಕನ್ನು (Art – 326 ) ನಮ್ಮ ನೆಲ, ಜಲ, ನಾಡಿನ ದೇಶದ ಒಳಿತಿಗೆ ಕಾನೂನುಗಳನ್ನು ರಚಿಸುವ ಜನಪ್ರತಿನಿಧಿಗಳ ಆಯ್ಕೆಯಲ್ಲಿ ಬಹು ಜಾಗೃತರಾಗಿ ಚಲಾಯಿಸಬೇಕಾಗಿದೆ.

ಒಮ್ಮೆ ಮತದಾನ ಮಾಡಿದರೆ ಐದು ವರ್ಷ ನಾಡಿನ, ದೇಶದ ಭವಿಷ್ಯವನ್ನು ಜವಾಬ್ದಾರಿ ಪ್ರತಿನಿಧಿಗಳಿಗೆ ವಹಿಸಿಕೊಟ್ಟಂತೆ. ವಿವೇಚನೆ ಇಲ್ಲದೆ ಹಣದ ಆಸೆಗೂ, ಕೊಡುವ ಉಡುಗೊರೆಯ ಆಮಿಷಕ್ಕೋ ಬಲಿಯಾಗಿ ನಿಮ್ಮ ಅಮೂಲ್ಯ ಮತವನ್ನು ಬೇಜವಾಬ್ದಾರಿ ಪ್ರತಿನಿಧಿಗೆ ಮಾರಿಕೊಂಡರೆ ನೆನಪಿಡಿ ನಮ್ಮನ್ನು ನಾವು ಮತ್ತೆ ಗುಲಾಮಗಿರಿಗೆ 5 ವರ್ಷ ತಳ್ಳಿಕೊಂಡಂತೆ.

ಅಭಿವೃದ್ಧಿಯ ಮನೋಭಾ ಹೊಂದಿದ, ಸದಾ ತನ್ನ ಕ್ಷೇತ್ರದ ಜನರಿಗೆ ಸ್ಪಂದಿಸುವ, ಸಜ್ಜನ ಪ್ರತಿನಿಧಿಗೆ ಮತವನ್ನು ಹಾಕಿದಲ್ಲಿ ಮತದಾನದ ಹಕ್ಕನ್ನು ಪಡೆಯಲು ಹೋರಾಡಿದ ಹಿಂದಿನ ನಮ್ಮ ಪರಂಪರೆಗೆ ಗೌರವ ಸಲ್ಲಿಸಿದಂತೆ. ಐದು ವರ್ಷದ ನಮ್ಮ ಮುಂದಿನ ಭವಿಷ್ಯವನ್ನು ನಾವೇ ರೂಪಿಸಿಕೊಂಡಂತೆ. ಅಲ್ಲದೆ ನಮ್ಮ ಮಕ್ಕಳ, ಯುವಕರ, ಮಹಿಳೆಯರ, ನಾಡಿನ, ದೇಶದ ಭವಿಷ್ಯವನ್ನು ನಾವೇ ಮುಂಚಿತವಾಗಿ ನಿರ್ಧರಿಸಿದಂತೆ.

ಹನಿ ಹನಿ ಗೂಡಿದರೆ ಹಳ್ಳ ಎಂಬಂತೆ ಒಂದೊಂದು ಸೂಕ್ತ ಮತ್ತು ಸರಿಯಾದ, ಸಮಯೊಚಿತ ಮತಗಳು ಸೇರಿ ನಮ್ಮ ರಾಜ್ಯದ, ದೇಶದ ಪ್ರಗತಿಯನ್ನು ಐದು ವರ್ಷದ ಮುಂಚಿತವಾಗಿ ನಾವೇ ಖಾತ್ರಿ ಪಡಿಸಿದಂತೆ.

ಈ ಮತದಾನದ ಹಕ್ಕನ್ನು ನಾವೆಲ್ಲ ತಪ್ಪದೇ ಹೆಚ್ಚಿನ ಸಂಖ್ಯೆಯಲ್ಲಿ ಚಲಾಯಿಸಿದಾಗ ಮಾತ್ರ, ಜನರು ದೇಶದ ಮತ್ತು ನಾಡಿನ ಆಡಳಿತವನ್ನು ಪ್ರತಿನಿಧಿಸಿದಂತೆ. ಹೀಗಾಗಿ ಮತ ಹಾಕಲು ಅರ್ಹತೆ ಹೊಂದಿದ ಎಲ್ಲಾ ಮನೆಯ ಸದಸ್ಯರನ್ನು ಕರೆದುಕೊಂಡು ಹೋಗಿ ಮತದಾನ ಮಾಡೋಣ. ಸಾರ್ವತ್ರಿಕ ಮತದಾನದ ಹಕ್ಕನ್ನು ಚಲಾಯಿಸಿ ನಮ್ಮ ಆಡಳಿತವನ್ನು ಜನರಾದ ನಾವೇ ಪ್ರತಿನಿಧಿಸೋಣ. ಆಗ ಮಾತ್ರ “ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಈ ಪ್ರಜಾಪ್ರಭುತ್ವ” ಎಂಬ ಮಾತು ನಿಜ ಅರ್ಥ ಪಡೆದುಕೊಳ್ಳುತ್ತದೆ.

ನೆನಪಿಡಿ ಮತದಾನ ಗಂಗೆಯಂತೆ ಪವಿತ್ರವಾದದ್ದು ಮಾರಿಕೊಂಡು ಕಲುಷಿತಗೊಳಿಸುವುದು ಬೇಡ. ಎಲ್ಲರೂ ತಪ್ಪದೆ ಮತದಾನ ಮಾಡಿ.

RELATED ARTICLES
- Advertisment -
Google search engine

Most Popular

Recent Comments