ಖ್ಯಾತ ‘ಸುಕೃತಿ ನಾಟ್ಯಾಲಯ’ ನೃತ್ಯಸಂಸ್ಥೆಯ ಗುರು ಹೇಮಾ ಪ್ರಭಾತ್ ಅಂತರರಾಷ್ಟ್ರೀಯ ನೃತ್ಯ ಕಲಾವಿದೆ-ನೃತ್ಯ ಸಂಯೋಜಕಿ ಮತ್ತು ಚಲನಚಿತ್ರ ಅಭಿನೇತ್ರಿಯಾಗಿ ವಿಖ್ಯಾತಿ ಪಡೆದವರು. ದೇಶ-ವಿದೇಶಗಳಲ್ಲಿ ಅನೇಕ ನೃತ್ಯಪ್ರದರ್ಶನ ನೀಡಿರುವ ಇವರು ವಿಶ್ವಪ್ರಸಿದ್ಧಿಯ ‘ಪ್ರಭಾತ್ ಕಲಾವಿದರು’ ಕುಟುಂಬದಿಂದ ಬಂದ ಹೆಮ್ಮೆಯ ಗುರು ಹೇಮಾ ಆ ನೃತ್ಯತಂಡದ ಅನೇಕ ನೃತ್ಯರೂಪಕಗಳಲ್ಲಿ ಭಾಗವಹಿಸಿ ರಸಿಕರಿಂದ ಮೆಚ್ಚುಗೆ ಪಡೆದವರು. ಇಂಥ ನುರಿತ ಗುರುಗಳ ಸಮರ್ಥ ಗರಡಿಯಲ್ಲಿ ಕಳೆದ 15 ವರ್ಷಗಳಿಂದ ನಾಟ್ಯತರಬೇತಿ ಪಡೆದ ಕಲಾಶಿಲ್ಪ ಕು.ತನುಶ್ರೀ ನಾಗೇಂದ್ರ ಉದಯೋನ್ಮುಖ ಕಲಾವಿದೆ ಹಾಗೂ ಬಹುಮುಖ ಪ್ರತಿಭೆ. ಪ್ರತಿಬಾರಿಯೂ ಹೊಸಪ್ರಯೋಗಳಲ್ಲಿ ತೊಡಗಿಕೊಳ್ಳುವ ಹೇಮಾ ಪ್ರಭಾತ್ ಅವರ ಕನ್ನಡ ಪ್ರೇಮ ಅನುಪಮ. ಉತ್ತಮ ಕನ್ನಡ ಕೃತಿಗಳಿಗೆ ಜೀವ-ರೂಪ ಕೊಡುವ ವೈಶಿಷ್ಟ್ಯ ಇವರದು. ಇದೀಗ ತನುಶ್ರೀ ಮೇ ತಿಂಗಳ 12 ನೇ ತಾ. ಶುಕ್ರವಾರ ಸಂಜೆ 6 .15 ಕ್ಕೆ ವಯ್ಯಾಲಿಕಾವಲ್ ನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಲಿದ್ದಾಳೆ. ಅವಳ ನೃತ್ಯ ಸೊಬಗನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸುಸ್ವಾಗತ.
ಶ್ರೀಮತಿ ಎಂ.ವಿ ಮಂಗಳಾ ಮತ್ತು ಆರ್. ನಾಗೇಂದ್ರ ಅವರ ಸುಪುತ್ರಿಯಾದ ತನುಶ್ರೀಗೆ ನೃತ್ಯ ಬಾಲ್ಯದ ಒಲವು. ಅವಳ ಅದಮ್ಯ ನಾಟ್ಯಾಸಕ್ತಿಯನ್ನು ಗಮನಿಸಿದ ತಾಯಿ ಕೂಡಲೇ ಅವಳನ್ನು ಗುರು ಹೇಮಾ ಪ್ರಭಾತ್ ಅವರಲ್ಲಿ ನೃತ್ಯ ಕಲಿಯಲು ಸೇರ್ಪಡೆ ಮಾಡಿದರು. ಆರುವರ್ಷಗಳ ಬಾಲಕಿ ಅದಮ್ಯ ಒಲವು-ಆಸಕ್ತಿಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಾ, ಗುರುಗಳ ಅತೀವ ಕಾಳಜಿಯುಕ್ತ ಮಾರ್ಗದರ್ಶನದಲ್ಲಿ ನೃತ್ಯದ ಎಲ್ಲ ಆಯಾಮಗಳನ್ನು ಪರಿಚಯಿಸಿಕೊಂಡಳು. ಸುಕೃತಿ ನಾಟ್ಯಾಲಯದ ‘ಅಹಂ ನಮಾಮಿ, ಹರಿ ಸರ್ವೋತ್ತಮ ಮತ್ತು ಡಾ. ಪುನೀತ್ ರಾಜಕುಮಾರರಿಗೆ ಅರ್ಪಿಸಿದ ‘ಕಲಾವೈಭವಂ’ ನಲ್ಲಿ ನರ್ತಿಸಿದ ಅಗ್ಗಳಿಕೆ ಇವಳದು. ವಿಶ್ವ ಪ್ರಸಿದ್ಧ ‘ಪ್ರಭಾತ್ ಕಲಾವಿದರು’ ತಂಡದಲ್ಲಿ ತನುಶ್ರೀ ‘ಕಿಂದರಜೋಗಿ’ ಮತ್ತು ‘ಸಿಂಡ್ರೆಲಾ’ ನೃತ್ಯರೂಪಕಗಳಲ್ಲಿ ಭಾಗವಹಿಸಿದ್ದಾಳೆ.
ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ ಪ್ರವೇಶಿಕಾ ಪೂರ್ಣ ಮತ್ತು ಮಧ್ಯಮ-ಪ್ರಥಮ ಮತ್ತು ಮಧ್ಯಮ ಪೂರ್ಣ ಪರೀಕ್ಷೆಗಳಲ್ಲಿ ಶ್ರೇಷ್ಠ ಅಂಕಗಳನ್ನು ಪಡೆದು ಪರಿಣತಿಯ ಹಾದಿಯಲ್ಲಿ ಸಾಗುತ್ತಿರುವ ಭರವಸೆಯ ನೃತ್ಯಕಲಾವಿದೆ ಇವಳು.
ಚಿಕ್ಕಂದಿನಿಂದ ಓದಿನಲ್ಲಿ ಚುರುಕಾಗಿರುವ ತನುಶ್ರೀ, ಲಿಟಲ್ ಫ್ಲವರ್ ಪಬ್ಲಿಕ್ ಶಾಲೆಯಲ್ಲಿ ಮತ್ತು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿನಿ ಎನಿಸಿಕೊಂಡು, ಕರ್ನಾಟಕ ಚಿತ್ರ ಕಲಾಪರಿಷತ್ ಫೈನ್ ಆರ್ಟ್ಸ್ ಕಾಲೇಜಿನಿಂದ ‘ವಿಷ್ಯುಲ್ ಆರ್ಟ್ಸ್ ‘ನಲ್ಲಿ ಪದವೀಧರೆಯಾದ ಇವಳು ಉತ್ತಮ ಚಿತ್ರ ಕಲಾವಿದೆ ಕೂಡ ಆಗಿರುವುದು ಅವಳ ಸೃಜನಾತ್ಮಕ ಪ್ರತಿಭೆಯ ದ್ಯೋತಕ..
ಹೆತ್ತವರ ಅಪಾರ ಪ್ರೋತ್ಸಾಹ ಹಾಗೂ ಗುರು ಹೇಮಾ ಪ್ರಭಾತ್ ಅವರ ಕಲಾತ್ಮಕ ಆಯಾಮದ ಮಾರ್ಗದರ್ಶನದಲ್ಲಿ ನೃತ್ಯರಂಗದಲ್ಲಿ ಮುನ್ನಡೆಯುತ್ತಿರುವ ತನುಶ್ರೀಗೆ ನೃತ್ಯಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ. ರಂಗಪ್ರವೇಶದ ಸುಸಂದರ್ಭದಲ್ಲಿ ಅವಳಿಗೆ ಹಾರ್ದಿಕ ಅಭಿನಂದನೆಗಳು.
**
• ವೈ.ಕೆ.ಸಂಧ್ಯಾ ಶರ್ಮ
ಕು. ತನುಶ್ರೀ ನಾಗೇಂದ್ರ ಉದಯೋನ್ಮುಖ ಪ್ರತಿಭೆಯ ತನುಮನಾರ್ಪಣೆ
RELATED ARTICLES