Tuesday, June 6, 2023
Homeಇದೀಗ ಬಂದ ತಾಜಾ ಸುದ್ದಿಶೈವಿ ಗುರುರಾಜ್ ಸುಮನೋಹರ ಏಕವ್ಯಕ್ತಿ ನೃತ್ಯ ಪ್ರದರ್ಶನ

ಶೈವಿ ಗುರುರಾಜ್ ಸುಮನೋಹರ ಏಕವ್ಯಕ್ತಿ ನೃತ್ಯ ಪ್ರದರ್ಶನ

ರಂಗಪ್ರವೇಶ ನೃತ್ಯ ಕಲಾವಿದರ ಜೀವನದಲ್ಲಿ ಚಿರಸ್ಮರಣೀಯ ರಸ ರೋಮಾಂಚದ ಪ್ರಮುಖ ಘಟ್ಟ. ತಾವು ಪಡೆದ ನೃತ್ಯ ತರಬೇತಿಯನ್ನು ತಮ್ಮ ನಾಟ್ಯಪ್ರತಿಭೆಯ ಮೂಲಕ ಕಲಾರಸಿಕರ ಮುಂದೆ ಪ್ರಸ್ತುತಪಡಿಸಲು ಒದಗುವ ಸದವಕಾಶ. ಇದೇ ಬಗೆಯಲ್ಲಿ ತನ್ನ ಏಕವ್ಯಕ್ತಿ ನೃತ್ಯ ಪ್ರದರ್ಶನದ ಮೊದಲ ಪ್ರಸ್ತುತಿಗಾಗಿ ವಿದ್ಯುಕ್ತವಾಗಿ ‘ರಂಗಾರೋಹಣ’ ಮಾಡುತ್ತಿರುವ ಉದಯೋನ್ಮುಖ-ಉತ್ಸಾಹೀ ನೃತ್ಯಕಲಾವಿದೆ ಶೈವಿ ಗುರುರಾಜ್, ಪ್ರತಿಭಾವಂತ, ನೃತ್ಯ ಕಲಾವಿದ ಹಾಗೂ ಗುರುಗಳಾದ ಶ್ರೀನಿವಾಸನ್ ರಾಜೇಂದ್ರನ್ ಅವರ ನೆಚ್ಚಿನ ಶಿಷ್ಯೆ. ಇದೇ ಮೇ ತಿಂಗಳ 10 ಬುಧವಾರದಂದು ಸಂಜೆ 6 .30 ಕ್ಕೆ ಮಲ್ಲೇಶ್ವರದ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ಶೈವೀ ತನ್ನ ಸುಂದರ ಹೆಜ್ಜೆ-ಗೆಜ್ಜೆಯ ಸುಮಧುರ ನಾದವನ್ನು ಅನುರಣಿಸಲಿದ್ದಾಳೆ. ಆಕೆಯ ರಮ್ಯ ಭರತನಾಟ್ಯ ಕಾರ್ಯಕ್ರಮವನ್ನು ವೀಕ್ಷಿಸಲು ಸರ್ವರಿಗೂ ಮುಕ್ತ ಸ್ವಾಗತ.


ಕು. ಶೈವಿ ಬಾಲಪ್ರತಿಭೆ. ನೃತ್ಯ ಅವಳ ಬಾಲ್ಯದ ಒಲವು. ಅವಳ ನಾಟ್ಯಾಸಕ್ತಿ-ಉತ್ಸಾಹವನ್ನು ಗುರುತಿಸಿ, ಅವಳನ್ನು ಕ್ರಮಬದ್ಧ ನೃತ್ಯಕಲಿಕೆಗೆ ಸೇರ್ಪಡೆಗೊಳಿಸಿದವರು ಅವಳ ತಂದೆ- ಗುರುರಾಜ್ ಗುಂಡಪ್ಪ ಹಾಗೂ ತಾಯಿ ಪ್ರೀತಿ. ಕಲಾಸಕ್ತ ಕುಟುಂಬ ಅವರದು. ಸಾಂಸ್ಕೃತಿಕ ಕಲೆಗಳಲ್ಲಿ ಅತ್ಯಂತ ಆಸಕ್ತರಾದ ಶ್ರೀ ಗುರುರಾಜ್ ಅವರ ಒತ್ತಾಸೆ-ಬೆಂಬಲಗಳಿಂದ ನಾಲ್ಕೂವರೆ ವರ್ಷದ ಚೆಲುವಾದ ಪುಟಾಣಿ ಬಾಲೆ ಪ್ರಥಮವಾಗಿ ಹೆಜ್ಜೆಹಾಕಿದ್ದು ಖ್ಯಾತ ‘ನಾಟ್ಯ ಕಲಾಕ್ಷೇತ್ರ’ ದ ಪಂದನಲ್ಲೂರು ನೃತ್ಯಶೈಲಿಯ ಬದ್ಧತೆಯ ಗುರು-ಪ್ರತಿಭಾವಂತ ನರ್ತಕರಾದ ಪ್ರಶಾಂತ ಶಾಸ್ತ್ರಿಯವರ ನೃತ್ಯಶಾಲೆಯ ಕಲಾತ್ಮಕ ಪರಿಸರದಲ್ಲಿ. ಆರುವರ್ಷಗಳ ಕಾಲ ಅತ್ಯಂತ ಆಸಕ್ತಿಯ ಕಲಿಕೆ ಶೈವಿಯದು. ಉತ್ತಮ ತರಬೇತಿ ಪಡೆದು ಪುಣೆಯ ಗಂಧರ್ವ ನೃತ್ಯಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ತೇರ್ಗಡೆಯಾದ ಹೆಮ್ಮೆ ಅವಳದು. ನಾಟ್ಯ ಕಲಾಕ್ಷೇತ್ರದ ಅನೇಕ ವಾರ್ಷಿಕ ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಲ್ಲದೆ ಹಲವಾರು ದೇವಾಲಯಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ವಿಶೇಷ ಇವಳದಾಗಿದೆ. ನೃತ್ಯಕ್ಕೆ ಹೇಳಿ ಮಾಡಿಸಿದ ಸಪೂರ ಮೈಮಾಟ- ಮುದ್ದಾದ ಚೆಲುವು ಚೆಲ್ಲುವ ಮೊಗ ಅವಳದು.
ಮುಂದೆ- ತಂಜಾವೂರು ಶೈಲಿಯ ಭರತನಾಟ್ಯದ ಗುರು ಶ್ರೀನಿವಾಸನ್ ರಾಜೇಂದ್ರನ್ ಅವರಲ್ಲಿ ನೃತ್ಯ ತರಬೇತಿ ಮುಂದುವರಿಯಿತು. ಗುರುಗಳ ವ್ಯಾಪಕ ಜ್ಞಾನ ಹಾಗೂ ಬೋಧನೆಯ ಅನನ್ಯ ವಿಧಾನವನ್ನು ಕರಗತ ಮಾಡಿಕೊಳ್ಳಲು ಯತ್ನಿಸುತ್ತಿರುವ ಶೈವಿ ಯಲಹಂಕದ ವಿದ್ಯಾಶಿಲ್ಪ ಅಕಾಡೆಮಿ ಶಾಲೆಯಲ್ಲಿ 9 ನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ಒದಿನಲ್ಲಿ ಚುರುಕಾಗಿರುವ ಇವಳು, ಶಾಲೆಯ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾಳೆ. ಅನೇಕ ಬಹುಮಾನಗಳನ್ನು ಪಡೆದದ್ದೂ ಉಂಟು.
ಕಠಿಣ ಪರಿಶ್ರಮ-ಬದ್ಧತೆಗಳಿಂದ ನೃತ್ಯಾಭ್ಯಾಸ ಮಾಡುತ್ತಿರುವ ಒಟ್ಟು 8 ವರ್ಷಗಳ ನೃತ್ಯಾಭ್ಯಾಸದಲ್ಲಿ ಇಬ್ಬರು ಗುರುಗಳ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನೃತ್ಯಕ್ಕಾಗಿ ಸಮರ್ಪಿತ ನೃತ್ಯ ವಿದ್ಯಾರ್ಥಿನಿ ಇವಳೆಂದರೆ ಅತಿಶಯೋಕ್ತಿಯಲ್ಲ. ಅವಳೆಲ್ಲ ಪ್ರಗತಿ-ಸಾಧನೆಗೆ ಬೆಂಬಲವಾಗಿರುವ ಕಲಾಪೋಷಕರಾದ ಅವಳ ಹೆತ್ತವರು, ಅಜ್ಜಿ-ತಾತಂದಿರು, ಹಿತೈಷಿಗಳ ಬಗ್ಗೆ ವಿನಮ್ರ ಸ್ವಭಾವದ ಶೈವಿ ಅತ್ಯಂತ ಕೃತಜ್ಞಳು.
******** ವೈ.ಕೆ.ಸಂಧ್ಯಾ ಶರ್ಮ

RELATED ARTICLES
- Advertisment -
Google search engine

Most Popular

Recent Comments